ಬೆಂಗಳೂರು, ಡಿ.03 (DaijiworldNews/PY): "ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದರೂ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮಾಡದೆ ಜನಸ್ವರಾಜ್ ಯಾತ್ರೆ ಮಾಡಿ ಏನು ಫಲ? ಮೊದಲು ತಮ್ಮ ಸರ್ವಾಧಿಕಾರಿ ಮನಸ್ಥಿತಿ ಬದಲಿಸಿಕೊಂಡು ಅಧಿಕಾರ ವಿಕೇಂದ್ರೀಕರಣದ ಕಡೆಗೆ ಕೆಲಸ ಮಾಡಲಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಚುನಾವಣೆ ನಡೆಸಲು ಬಿಜೆಪಿಯವರಿಗೆ ಭಯ. ಹೀಗಾಗಿ ಚುನಾವಣೆ ಮುಂದೂಡಲು ಬೇಕಂತಲೇ ವಿವಾದಾತ್ಮಕ ಕಾನೂನು ತಂದಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇದ್ದಿದ್ದರೆ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಮುಂದೂಡುತ್ತಿರಲಿಲ್ಲ" ಎಂದಿದ್ದಾರೆ.
"ನರೇಂದ್ರ ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷಗಳಾದರೂ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಬಲ ತುಂಬಲಿಲ್ಲ, ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಲು ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಅಭಿವೃದ್ಧಿ ಕೆಲಸ ಮಾಡದೆ ಜನಸ್ವರಾಜ್ ಯಾತ್ರೆ ನಡೆಸಲು ನೈತಿಕ ಹಕ್ಕು ಇದೆಯಾ?" ಎಂದು ಪ್ರಶ್ನಿಸಿದ್ದಾರೆ.
"ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ನೀಡಿದ್ದು ಕಾಂಗ್ರೆಸ್ ಪಕ್ಷ. ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತಂದರು. ಅದನ್ನು ನರಸಿಂಹರಾವ್ ಅವರ ಸರ್ಕಾರ ಜಾರಿಗೊಳಿಸಿತು. ಅನುದಾನ ನೀಡದೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದೆ ಬಿಜೆಪಿ ಸಾಧನೆ" ಎಂದು ಟೀಕಿಸಿದೆ.