ಚಿಕ್ಕಮಗಳೂರು, ಡಿ. 03 (DaijiworldNews/HR): ಸರ್ಕಾರವು ಒಮಿಕ್ರಾನ್ ವೈರಸ್ ವಿಚಾರದಲ್ಲಿ ಕೂಡ ಲಂಚ ಹೊಡೆಯುವುದನ್ನು ಬಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಒಮಿಕ್ರಾನ್ ವೈರಸ್ ವಿಚಾರದಲ್ಲಿ ಮಾಹಿತಿ ಬರುತ್ತಾ ಇದ್ದು, ನಿಖರವಾಗಿ ಯಾವುದೇ ಪ್ರಕರಣಗಳು ಹೊರಬರುತ್ತಿಲ್ಲ.ಅಲ್ಲಿ ಇಲ್ಲಿ ಒಂದೊಂದು ಪ್ರಕರಣಗಳ ಬಗ್ಗೆ ವರದಿ ಆಗಿದೆ. ಭಯದ ವಾತಾವರಣ ಸೃಷ್ಟಿಸಬಾರದು, ಸರಕಾರ, ಆರೋಗ್ಯ ಇಲಾಖೆ ಮುಂಜಾಗೃತ ಕ್ರಮ ವಹಿಸಬೇಕು" ಎಂದರು.
ಇನ್ನು "ಸರ್ಕಾರಕ್ಕೆ ಎಲ್ಲಾ ರೀತಿ ಸಹಕಾರವನ್ನು ನೀಡಲಾಗುತ್ತೆ, ನಾವು ಅಡ್ಡಿ ಬರುವುದಿಲ್ಲ. ಈಗಾಗಲೇ ಇಡೀ ದೇಶದ ಜನರು ನರಳುತ್ತಿದ್ದು, ಸುಮ್ಮನೆ ಭಯ ಉಂಟು ಮಾಡಿ, ಎಲ್ಲಾ ವ್ಯವಹಾರಗಳನ್ನು ನಿಲ್ಲಿಸುವಂತೆ ಮಾಡಬಾರದು" ಎಂದು ಹೇಳಿದ್ದಾರೆ.