ಬೆಂಗಳೂರು, ಡಿ.03 (DaijiworldNews/PY): "ಬೆಂಗಳೂರಿನಲ್ಲಿ ಇಬ್ಬರಿಗೆ ಓಮ್ರಿಕಾನ್ ಸೋಂಕು ದೃಢಪಟ್ಟಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸೋಂಕಿತರ ಸಂಪರ್ಕಿತರ ಪತ್ತೆಗೆ ಸೂಚಿಸಿದ್ದೇನೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ದಿನಗಳಲ್ಲಿ ಓಮ್ರಿಕಾನ್ ವೈರಸ್ ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು. ಸಭೆಯ ನಂತರ ಮಾರ್ಗಸೂಚಿ ಸಿದ್ದಪಡಿಸುತ್ತೇವೆ" ಎಂದಿದ್ದಾರೆ.
"ಬೇರೆ ಬೇರೆ ದೇಶಗಳಲ್ಲಿ ಪ್ರೋಟೋಕಾಲ್ ಹೇಗೆ ಎನ್ನುವುದರ ಬಗ್ಗೆ ಅಧ್ಯಯನ ನಡೆಸಿ ಓಮ್ರಿಕಾನ್ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ನಿನ್ನೆ ಸಂಜೆ ಇಬ್ಬರಲ್ಲಿ ಓಮ್ರಿಕಾನ್ ಸೋಂಕು ದೃಢಪಟ್ಟಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಸಂಪರ್ಕಿತರ ಪತ್ತೆಗೆ ಸೂಚನೆ ನೀಡಿದ್ದೇನೆ" ಎಂದಿದ್ಧಾರೆ.