ಬೆಂಗಳೂರು, ಡಿ.03 (DaijiworldNews/PY): "ಬಿಕಾಂ ಓದಲಾಗದೇ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ್ದ ಅಸಾಮಿ ಅದಾನಿ ಶ್ರೀಮಂತರಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಕುಮ್ಮಕ್ಕೆ ಕಾರಣ. ಬಿಜೆಪಿ ಅಧಿಕಾರದಲ್ಲಿದ್ದರೆ ಶ್ರೀಮಂತರು ಮಾತ್ರ ಬೆಳೆಯಲು ಸಾಧ್ಯ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, "ಪ್ರಧಾನಿ ಮೋದಿ ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಿ ಅಧಿಕಾರ ಹಿಡಿದು ಕುಳಿತಿದ್ದಾರೆ. ಏಷ್ಯಾದಲ್ಲೇ ಅದಾನಿ ನಂಬರ್ ಒನ್ ಶ್ರೀಮಂತರಾಗಿದ್ದಾರೆ. ಉದ್ಯಮಿ ಮುಖೇಶ್ ಅಂಬಾನಿಗಿಂತಲೂ ಅದಾನಿ ಮೇಲ್ಮಟ್ಟಕ್ಕೆ ಹೋಗಿದ್ಧಾರೆ" ಎಂದಿದ್ದಾರೆ.
"ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ, ಭ್ರಷ್ಟ ಜನತಾ ಪಾರ್ಟಿ. ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿ ಅವರಿಗೆ ಪತ್ರ ಬರೆದು ದೂರು ನೀಡಿದೆ" ಎಂದು ಹೇಳಿದ್ದಾರೆ.
"ಬಿಜೆಪಿ ಸರ್ಕಾರ ನಮ್ಮ ಸರ್ಕಾರ ಜಾರಿಗೆ ತಂದ ಜನ ಪರ ಕೆಲಸಗಳನ್ನು ನಿಲ್ಲಿಸಿದ್ದು, ಅದಾನಿ, ಅಂಬಾನು ಅವರಂತಹ ಶ್ರೀಮಂತರಿಗೆ ಬೆಂಬಲವಾಗಿನಿಂತಿದೆ. ಬಿಜೆಪಿ ಅಧಿಕಾರದಲ್ಲಿದ್ದರೆ ಶ್ರೀಮಂತರು ಮಾತ್ರ ಬೆಳೆಯಲು ಸಾಧ್ಯ. ಕೇಂದ್ರದ ಕೃಷಿ ಕಾನೂನುಗಳನ್ನು ರದ್ದು ಮಾಡಬೇಕು ಎಂದು ರೈತರು ಒಂದು ವರ್ಷ ನಿರಂತರವಾಗಿ ಪ್ರತಿಭಟನೆ ನಡೆಸಿದ್ದು, ಇದರಲ್ಲಿ 700 ಮಂದಿ ಸಾವನ್ನಪ್ಪಿದ್ದರು. ಪಂಚರಾಜ್ಯಗಳ ಚುನಾವಣೆ ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕಾನೂನುಗಳನ್ನು ಹಿಂಪಡೆದಿದ್ದಾರೆ. ಪ್ರಧಾನಿ ಮೋದಿ ಅವರು ಈ ಕೆಲಸವನ್ನು ಮೊದಲೇ ಮಾಡಿದ್ದರೆ 700 ಮಂದಿಯ ಪ್ರಾಣ ಉಳಿಯುತ್ತಿತ್ತು" ಎಂದು ತಿಳಿಸಿದ್ದಾರೆ.
"ಲಖಿಂಪುರ ಖೇರಿ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಬಿಜೆಪಿಯವರು ರಾಕ್ಷ ಮನಸ್ಥಿತಿ ಇರುವವರು. ಬಿಜೆಪಿ ಬಿಟ್ಟು ನೀವು ಒಳ್ಳೆಯ ಕೆಲಸ ಮಾಡಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿಯವರು ಅತ್ಯಂತ ಭ್ರಷ್ಟರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿದ್ದ ಸಚಿವರಾಗಿದ್ದರು. ಭ್ರಷ್ಟಾಚಾರದ ಆರೋಪ ಕೇಳಿ ಬಂದ ವೇಳೆ ಆಯೋಗ ರಚನೆ ಮಾಡಿ ತನಿಖೆ ಕೈಗೊಳ್ಳಬೇಕಿತ್ತು. ಈ ಸರ್ಕಾರ ಆ ಕೆಲಸವನ್ನು ಮಾಡುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, "ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ. ವ್ಯಕ್ತಿ ಪೂಜೆ ಮಾಡುವುದನ್ನು ಬಿಟ್ಟು, ಪಕ್ಷ ಪೂಜೆ ಮಾಡಿ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇದೆ" ಎಂದು ತಿಳಿಸಿದ್ದಾರೆ.