ಮೇಲುಕೋಟೆ, ಡಿ. 03 (DaijiworldNews/HR): ತಮ್ಮ ಸಣ್ಣ ವಯಸ್ಸಿಯಲ್ಲಿ ಪ್ರೇಮಿಗಳಾಗಿದ್ದು, ಬಳಿಕ ಬೇರ್ಪಟ್ಟಿದ್ದ ಜೋಡಿಯೊಂದು 35 ವರ್ಷದ ಬಳಿಕ ಮದುವೆಯಾಗಿರುವ ಘಟನೆ ಮೇಲುಕೋಟೆಯಲ್ಲಿ ನಡೆದಿದೆ.
65 ವರ್ಷ ವಯಸ್ಸಿನ ವರ ಚಿಕ್ಕಣ್ಣ, 55 ವರ್ಷದ ವಧು ಜಯಮ್ಮ ಸಪ್ತಪದಿ ತುಳಿದಿದ್ದು ಮರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೊಳೆನರಸೀಪುರದವರಾದ ಚಿಕ್ಕಣ್ಣ ಹಿಂದೆ ಮೈಸೂರಿನಲ್ಲಿ ಕೂಲಿಕೆಲಸ ಮಾಡುತ್ತಿದ್ದ ವೇಳೆ ಅತ್ತೆ ಮಗಳಾದ ಮೈಸೂರಿನ ಜಯಮ್ಮ ಅವರನ್ನು ಪ್ರೀತಿಸುತ್ತಿದ್ದರು. ಅವರ ವಿವಾಹ ಪ್ರಸ್ತಾಪ ಒಪ್ಪದ ವಧುವಿನ ಕುಟುಂಬ ಜಯಮ್ಮ ಅವರಿಗೆ ಬೇರೆ ವಿವಾಹ ಮಾಡಿದ್ದರು. ಬಳಿಕ ಜಯಮ್ಮ ಅವರನ್ನು ಅವರ ಪತಿ ತೊರೆದುಹೋಗಿದ್ದರು. ಆದರೆ 35 ವರ್ಷ ಕಳೆದರೂ ಚಿಕ್ಕಣ್ಣ ಮಾತ್ರ ಮದುವೆ ಆಗಿರಲಿಲ್ಲ. ಇದೀಗ ಇಬ್ಬರೂ ಭೇಟಿಯಾಗಿ ವಿವಾಹವಾಗಲು ನಿಶ್ಚಯಿಸಿದ್ದು, ಇಳಿವಯಸ್ಸಿನ ಜೋಡಿ ಚೆಲುವನಾರಾಯಣನ ಕ್ಷೇತ್ರವಾದ ಮೇಲುಕೋಟೆಯಲ್ಲಿ ಮದುವೆಯಾಗಿದ್ದಾರೆ.
ಇನ್ನು ಈ ವಯಸ್ಸಿನಲ್ಲಿ ಒಂದಾಗಿ ನೆಮ್ಮದಿಯ ಜೀವನ ಮಾಡಬೇಕೆಂಬ ಉದ್ದೇಶದಿಂದ ಮದುವೆಯಾಗಿದ್ದೇವೆ. ಇದಕ್ಕೆ ಅಪಾರ್ಥ ಕಲ್ಪಿಸಬೇಡಿ ಎಂದು ದಂಪತಿ ಮನವಿ ಮಾಡಿಕೊಂಡಿದ್ದಾರೆ.