ಬೆಂಗಳೂರು, ಡಿ.03 (DaijiworldNews/PY): ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೊಸ ಬಾಂಬ್ ಸಿಡಿಸಿದ್ದು, "ರಾಜ್ಯ ಸಚಿವ ಸಂಪುಟದಲ್ಲಿ ಡಿ.10ರ ನಂತರ ಭಾರೀ ಬದಲಾವಣೆಯಾಗಲಿದೆ" ಎಂದಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಜೊತೆ ಕೆಲ ಸಚಿವರು ಸುತ್ತಾಡುತ್ತಲೇ ಇದ್ದಾರೆ. ಅವರು ಶಾಸಕರಿಗೆ ಸಮಯ ನೀಡುವುದಿಲ್ಲ. ಡಿ.10ರ ನಂತರ ಅಂತವರನ್ನು ಸಂಪುಟದಿಂದಲೇ ಕೈ ಬಿಡುವ ಚಿಂತನೆಗಳು ನಡೆದಿವೆ. ಎಲ್ಲಾ ಸಚಿವರ ಕೈಬಿಡುವ ಬಗ್ಗೆ ಚಿಂತನೆ ನಡೆದಿಲ್ಲ. ಕೆಲಸ ಮಾಡದೇ ಇರುವ ಸಚಿವರನ್ನು ಸಂಪುಟದಿಂದ ಕೈಬಿಡುವ ಚಿಂತನೆ ನಡೆದಿದೆ. ಸಿಎಂ ಬದಲಾವಣೆ ಆಗುವುದಿಲ್ಲ" ಎಂದು ಹೇಳಿದ್ದಾರೆ.
"ಕೆಲವು ಸಚಿವರು ಸಿಎಂ ಅವರೊಂದಿಗೆ ಓಡಾಡಿಕೊಂಡು ಇರುತ್ತಾರೆ. ಸಚಿವರು ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡಲಿಲ್ಲ ಎಂದಾದಲ್ಲಿ ಮುಂದಿನ ದಿನಗಳಲ್ಲಿ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, "ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಯತ್ನಾಳ್ ಅವರಿಗೆ ಗೌಪ್ಯ ಮಾಹಿತಿ ಬಂದಿರಬಹುದು. ರಾಜ್ಯಕ್ಕೆ ತೆರಳಿದ ಬಳಿಕ ಅವರ ಜೊತೆ ನಾನು ಮಾತುಕತೆ ನಡೆಸುತ್ತೇನೆ" ಎಂದಿದ್ದಾರೆ.