ಬೆಂಗಳೂರು, ಡಿ.03 (DaijiworldNews/PY): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಗ್ಗೆ ವ್ಯಂಗ್ಯವಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, 'ರಾಜಕೀಯ ರಕ್ಕಸತನʼಕ್ಕೆ ಅವರು ರಾಜಾಧಿರಾಜ ಎಂದು ತಿಳಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, "ಮಾಜಿ ಪ್ರಧಾನಿಗಳೊಬ್ಬರು ಹಾಲಿ ಪ್ರಧಾನಿಯನ್ನು ಭೇಟಿ ಮಾಡುವುದು ತಪ್ಪೇ? ಸಂಸತ್ ಕಲಾಪಕ್ಕೆ ತೆರಳಿದ್ದ ಹೆಚ್.ಡಿ.ದೇವೇಗೌಡರು ಅಲ್ಲಿಯೇ ಇದ್ದ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಆ ಭೇಟಿ ರಾಜಕೀಯ, ಸಂಕುಚಿತತೆಯ ಎಲ್ಲೆ ಮೀರಿದ್ದು ಎನ್ನುವುದನ್ನು ಆ ಇಬ್ಬರು ನಾಯಕರ ಭೇಟಿಯ ಚಿತ್ರಗಳೇ ಹೇಳುತ್ತವೆ" ಎಂದಿದ್ದಾರೆ.
ಅಸೂಯೆ, ದ್ವೇಷ, ಅಸಹನೆ, ಸರ್ವಾಧಿಕಾರಿ ಮನೋಭಾವದ ʼಸಿದ್ದಕಲೆʼಯ ನಿಪುಣನಿಗೆ ರಾಜಕೀಯದಲ್ಲಿ ವಿರಳಾತಿ ವಿರಳವಾಗಿ ಕಾಣುವ ಇಂಥ ಭೇಟಿಗಳನ್ನು ಅರಗಿಸಿಕೊಳ್ಳುವುದು ಹೇಗೆ ತಾನೇ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
'ರಾಜಕೀಯ ರಕ್ಕಸತನ'ಕ್ಕೆ ಅವರು ರಾಜಾಧಿರಾಜ. 'ರಾಜಕೀಯ ಆಶ್ರಯ' ನೀಡಿದ ಕಾಂಗ್ರೆಸ್ ಪಕ್ಷವನ್ನೇ ಹೆಬ್ಬಾವಿನಂತೆ ನುಂಗಲು ಹೊರಟ ʼಸಿದ್ದಸೂತ್ರಧಾರʼನಿಗೆ ರಾಜಕೀಯ ಬದುಕು ಕೊಟ್ಟು ಬೆಳೆಸಿದ ಜೆಡಿಎಸ್ ಪಕ್ಷವನ್ನು ಮುಳುಗಿಸಿಬಿಡುವ ಹಗಲುಕನಸು ಬೇರೆ ಇದೆ ಎಂದು ಹೇಳಿದ್ದಾರೆ.
"ದೇವೇಗೌಡರು ಅವಕಾಶವಾದಿ ರಾಜಕಾರಣಿ ಎನ್ನುವ ಆ ನಾಲಗೆ, ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎನ್ನುವ ಆ ನಾಲಗೆಯ ಮೇಲೆ ʼಪಕ್ಷನಿಷ್ಠೆʼ ಎನ್ನುವ ಪದ ಎಂದಾದರೂ ಬಂದಿದೆಯಾ? ಅದಕ್ಕೆ ಆ ಪದ ʼಪರಮ ಅಪಥ್ಯʼ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತು" ಎಂದು ಟೀಕಿಸಿದ್ದಾರೆ.
ನನಗಿಲ್ಲದಿದ್ದರೆ ಯಾರಿಗೂ ಬೇಡ ಎನ್ನುವ ಸ್ವಾರ್ಥ ಮನೋಭಾವದಿಂದ ಸ್ವಪಕ್ಷವೂ ಇದ್ದ ಮೈತ್ರಿ ಸರಕಾರವನ್ನೇ ʼಸ್ವಾಹಾʼ ಮಾಡಿ ಆಪರೇಷನ್ ಕಮಲದ ಕೆಸರಿನಲ್ಲಿ ವಿಕೃತವಾಗಿ ಹೊರಳಾಡಿದವರು ಯಾರು ಎನ್ನುವುದು ಅವರ ಸ್ವಪಕ್ಷೀಯರಿಗೇ ಚೆನ್ನಾಗಿ ಗೊತ್ತು ಎಂದಿದ್ದಾರೆ.
"ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ. ಇನ್ನು, ಪಕ್ಷದ ಬಗ್ಗೆ ಹೇಳುವುದೇ ಬೇಡ. ಅಧ್ಯಕ್ಷರಿಗೊಂದು ಕಾಂಗ್ರೆಸ್, ಪ್ರತಿಪಕ್ಷ ನಾಯಕರಿಗೊಂದು ಕಾಂಗ್ರೆಸ್. ಅಷ್ಟೇ ಅಲ್ಲ; ಜಿಲ್ಲೆಗಳಲ್ಲಿ ಎರಡೆರಡು ಕಾಂಗ್ರೆಸ್ʼಗಳು!! ʼಸಿದ್ದಸೂತ್ರಧಾರʼನಿಗೆ ಇದೆಲ್ಲ ಗೊತ್ತಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ಬಾಯಲ್ಲಿ ಜಾತ್ಯತೀತೆಯ ಜಪ ಮಾಡುತ್ತಲೇ ʼಸಂದೇಶ ಸನ್ನಿಧಿʼಯಲ್ಲಿ ʼಸಿದ್ಧಸೂತ್ರʼ ಹೆಣೆದ ʼರಕ್ಕಸ ರಾಜಕಾರಣʼಕ್ಕೆ ಕೊನೆಗಾಲ ಬಂದಿದೆ. ಆ ದಿನವೂ ಹತ್ತಿರದಲ್ಲೇ ಇದೆ ಎಂದಿದ್ದಾರೆ.