ಬೆಂಗಳೂರು, ಡಿ.02 (DaijiworldNews/PY): "ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಸೃಷ್ಟಿಯಾದ ಶೈಕ್ಷಣಿಕ ಬಿಕ್ಕಟ್ಟುಗಳಿಂದ ರಾಜ್ಯದ ಮಕ್ಕಳ ಭವಿಷ್ಯಕ್ಕೆ ಭರವಸೆ ಇಲ್ಲದಾಗಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಖಾಸಗಿ ಶಾಲೆಗಳು ಶುಲ್ಕ ಕಟ್ಟಡ ಪೋಷಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿವೆ, ಹಲವು ದಿನಗಳಿಂದ ಪೋಷಕರು ಶಾಲೆಗಳ ನಡುವೆ ಇದ್ದಂತಹ ಶುಲ್ಕ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಈ ಸರ್ಕಾರ ಸೋತಿದೆ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯಿಂದ ಸೃಷ್ಟಿಯಾದ ಶೈಕ್ಷಣಿಕ ಬಿಕ್ಕಟ್ಟುಗಳಿಂದ ರಾಜ್ಯದ ಮಕ್ಕಳ ಭವಿಷ್ಯಕ್ಕೆ ಭರವಸೆ ಇಲ್ಲದಾಗಿದೆ" ಎಂದಿದೆ.
"ಕೊರೊನಾ ಕಷ್ಟಕಾಲದಲ್ಲಿ ಪೋಷಕರ ಅಳಲನ್ನು ಕೇಳದೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸದ ಸರ್ಕಾರ ಶೈಕ್ಷಣಿಕ ಬಿಕ್ಕಟ್ಟು ನಿರ್ವಹಿಸುವಲ್ಲಿ ಸೋತಿರುವ ಶಿಕ್ಷಣ ಸಚಿವರೇ ಎಲ್ಲಿದ್ದೀರಿ?" ಎಂದು ಪ್ರಶ್ನಿಸಿದೆ.
ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿ ಸರ್ಕಾರದ ನಡವಳಿಕೆ ಮೊದಲಿಂದಲೂ 'ಕುಂಬಳ ಕಾಯಿಯ ಕಳ್ಳರಂತೆ'ಯೇ ಇದೆ, ಗಂಭೀರವಾಗಿ ತನಿಖೆ ನಡೆಸಬೇಕಿದ್ದ ಸಿಎಂ, ಗೃಹಸಚಿವರ ಮಾತು, ಕೃತಿಗಳು ಹಗರಣದ ದಿಕ್ಕು ತಪ್ಪಿಸುವಂತಿರುವುದನ್ನು ಜನ ನೋಡಿದ್ದಾರೆ. ಈ ಅಂತರರಾಷ್ಟ್ರೀಯ ಮಟ್ಟದ ಗಂಭೀರ ಹಗರಣದ ಉನ್ನತ ತನಿಖೆಗೆ ಬಿಜೆಪಿ ಹಿಂದೇಟು ಹಾಕುತ್ತಿರುವುದೇಕೆ? ಎಂದು ಕೇಳಿದೆ.
"ಇಡೀ ದೇಶದಲ್ಲಿಯೇ ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿರುವುದು ಅತ್ಯಂತ ಕಳವಳಕಾರಿ, ಸಂಕಷ್ಟದಲ್ಲಿರುವ ರೈತರ ಬಗ್ಗೆ ಸ್ವಲ್ಪವೂ ಕಳಕಳಿ ಇಲ್ಲದಂತೆ ನಡೆದುಕೊಳ್ಳುತ್ತಿದೆ. ಈ ಸರ್ಕಾರ. ಇದುವರೆಗೂ ರೈತರ ನೆರವಿಗೆ ಒಂದೇ ಒಂದು ಯೋಜನೆ ರೂಪಿಸಲಿಲ್ಲ, ಇಂತಹ ಸರ್ಕಾರದಲ್ಲಿ ರೈತರು ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ" ಎಂದು ಹೇಳಿದೆ.
"ಆತ್ಮಸಾಕ್ಷಿ ಇಲ್ಲದವರ ಆಡಳಿತದಲ್ಲಿ ರೈತರು ಆತ್ಮಹತ್ಯೆಯ ದಾರಿ ಹಿಡಿಯುವ ಸ್ಥಿತಿ ಎದುರಾಗಿದೆ. ರೈತ ವಿರೋಧಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಹೆಚ್ಚಿದೆ. ಲಾಕ್ಡೌನ್ ಪರಿಹಾರ, ನೆರ ಬರ ಪರಿಹಾರ ಕೊಡದ ಬಿಜೆಪಿಯೇ ಇದಕ್ಕೆ ಹೊಣೆ" ಎಂದು ಆರೋಪಿಸಿದೆ.