ಹುಬ್ಬಳ್ಳಿ, ಡಿ.02 (DaijiworldNews/PY): "ಸುಳ್ಳು ಪ್ರಚಾರ ಮಾಡುವುದರಲ್ಲಿ ಆರ್ಎಸ್ಎಸ್ ಬಿಜೆಪಿಯ ದೊಡ್ಡಪ್ಪ. ಸುಳ್ಳಿಗೆ ಜನರೂ ಸಹ ಬಲಿಯಾಗುತ್ತಿದ್ಧಾರೆ" ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್ಎಸ್ಎಸ್ ಬಿಜೆಪಿಯ ದೊಡ್ಡಪ್ಪ. ಅವರು ಸುಳ್ಳಿನ ಕಂತೆಯನ್ನೇ ಪ್ರಚಾರ ಮಾಡುತ್ತಾರೆ. ಯಾವುದೇ ರೀತಿಯಾದ ಸಾಧನೆ ಮಾಡದೇ, ಸುಳ್ಳಿನ ಕಂತೆ ಹೇಳಿ ಜನರನ್ನು ನಂಬಿಸುತ್ತಿದ್ದಾರೆ. ಜನರು ಎಚ್ಚರಿಕೆಯಿಂದ ಇರಬೇಕು" ಎಂದಿದ್ದಾರೆ.
"ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನಾಲ್ವರು ಮುಖ್ಯಮಂತ್ರಿಗಳಾಗವುದು ನಿಶ್ಚಿತ. ಈಗ ಇಬ್ಬರು ಸಿಎಂ ಆಗಿದ್ದಾರೆ. ಇನ್ನಿಬ್ಬರು ಆಗಬೇಕಿದೆ" ಎಂದು ಲೇವಡಿ ಮಾಡಿದ್ದಾರೆ.
"ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಪಕ್ಷದ ಅಭ್ಯರ್ಥಿಗೆ ಮಾತ್ರವೇ ಮೊದಲ ಪ್ರಾಶಸ್ತ್ಯ ಮತ ನೀಡಬೇಕು. ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ಜಯ ಸಾಧಿಸಬೇಕು" ಎಂದಿದ್ದಾರೆ.
"ಧಾರವಾಡ ವಿಧಾನ ಪರಿಷತ್ ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಕ್ಷೇತ್ರವಾಗಿದೆ. ರಾಜ್ಯ ಸರ್ಕಾರ ಹಣ, ಅಧಿಕಾರ, ಆಮಿಷ ಒಡ್ಡು ಹಾಗೂ ಭಯ ಸೃಷ್ಟಿಸುವ ಕೆಲಸ ಮಾಡುತ್ತಿದೆ" ಎಂದು ದೂರಿದ್ದಾರೆ.