ನವದೆಹಲಿ, ಡಿ.02 (DaijiworldNews/PY): ಪ್ರ"ತಿಪಕ್ಷದ ಸದಸ್ಯರು ಸಂಸತ್ತಿನಲ್ಲಿ ತೋರಿದ ಅಗೌರವದ ವರ್ತನೆಯನ್ನು ಪ್ರಜಾಪ್ರಭುತ್ವ ಎನ್ನುವಂತೆ ಸಮರ್ಥಿಸಿಕೊಳ್ಳಲು ಅಪಪ್ರಚಾರ ನಡೆಸಲಾಗುತ್ತಿದೆ" ಎಂದು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಆರೋಪಿಸಿದ್ದಾರೆ.
ರಾಜ್ಯಸಭೆ ವಿರೋಧಪಕ್ಷದ 12 ಸಂಸದರನ್ನು ಅಮಾನತುಗೊಳಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಮೇಲ್ಮನೆಯಲ್ಲಿ ಮಾತನಾಡಿದ ಅವರು, "ವಿಪಕ್ಷ ನಾಯಕರು ಅಮಾನತುಗಳನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಕರೆದಿದ್ದು, ಈ ಕ್ರಮವನ್ನು ವಿರೋಧಿಸಲು ಕಾರಣಗಳನ್ನು ತಿಳಿಸುತ್ತಿಲ್ಲ. ಸಂಸದರು ಕಳೆದ ಮುಂಗಾರು ಅಧಿವೇಶನದ ವೇಳೆ ತೋರಿದ ನಡವಳಿಗೆ ಅಸಮಾಧಾನಕರವಾಗಿತ್ತು" ಎಂದಿದ್ದಾರೆ.
"ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಚಾರ ಮಾಡಲಾಗುತ್ತಿದೆ ಎನ್ನುವ ಸಂದೇಶವನ್ನು ರವಾನಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ವರ್ತನೆಯ ಕಾರಣದಿಂದ ಸದನದ ಪ್ರಜಾಸತ್ತಾತ್ಮಕತೆಗೆ ಅಪಚಾರವಾಗಲಿಲ್ಲವೇ?. ಪ್ರಜಾಪ್ರಭುತ್ವದ ಈ ಹೊಸ ಮಾನದಂಡಗಳನ್ನು ದೇಶದ ಪ್ರಜೆಗಳು ಒಪ್ಪಿಕೊಳ್ಳುವುದಿಲ್ಲ ಎನ್ನುವ ವಿಶ್ವಾಸ ನನಗಿದೆ" ಎಂದು ತಿಳಿಸಿದ್ದಾರೆ.
"ತಪ್ಪು ಮಾಡುವುದು ಸಹಜ. ಆದರೆ, ಅದನ್ನು ತಿದ್ದಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಒಂದು ಬಾರಿ ಮಾಡಿದ ತಪ್ಪನ್ನು ನಿರಾಕರಿಸುವಂತಿಲ್ಲ ಹಾಗೂ ತಪ್ಪುಗಳನ್ನು ಮುಚ್ಚಿಹಾಕಿವಂತೆ ಒತ್ತಾಯಿಸಲು ಆಗುವುದಿಲ್ಲ" ಎಂದಿದ್ದಾರೆ.
"ನಿಮ್ಮ ವರ್ತನೆಯ ಬಗ್ಗೆ ನೀವು ಕ್ಷಮಾಪಣೆ ಕೇಳಲೂ ಬಯಸುವುದಿಲ್ಲ. ಆದರೆ, ಸದನದ ತೀರ್ಮಾನವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದೀರಿ. ಪ್ರಜಾಪ್ರಭುತ್ವದ ತತ್ವಗಳನ್ನು ಇದು ಎತ್ತಿಹಿಡಿಯುತ್ತದೆಯೇ?" ಎಂದು ಕೇಳಿದ್ದಾರೆ.