ಬೆಂಗಳೂರು, ಡಿ.02 (DaijiworldNews/PY): ಲಡಾಖ್ನಲ್ಲಿ ಚೀನಿ ಪಡೆಗಳು ವಾಸ್ತವ ನಿಯಂತ್ರಣ ರೇಖೆ ದಾಟಿದವೇ ಎಂದು ಪ್ರಶ್ನಿಸಿದ್ದಕ್ಕೆ ತಮ್ಮನ್ನು ರಾಜ್ಯಸಭಾ ಸೆಕ್ರೇಟರಿಯೇಟ್ ತಡೆ ಹಿಡಿದಿದ್ದಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ಧಾರೆ.
ರಾಷ್ಟ್ರೀಯ ಭದ್ರತೆಯ ಸಂಬಂಧ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೆಕ್ರೇಟರಿಯೇಟ್ ತಡೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಷ್ಟ್ರೀಯ ಹಿತಾಸಕ್ತಿ ಎಂದುಕೊಂಡು ಚೀನೀಯರು ವಾಸ್ತವ ನಿಯಂತ್ರಣ ರೇಖೆ ದಾಟಿದರೋ ಇಲ್ಲವೋ ಎಂಬ ನನ್ನ ಪ್ರಶ್ನೆಯನ್ನು ಕೇಳಲು ಅನುಮತಿ ನೀಡದೆ ಇರುವುದು ರಾಜ್ಯಸಭಾ ಸೆಕ್ರೇಟರಿಯೇಟ್ಗೆ ದುರಂತವಲ್ಲದೇ ಇದ್ದರೂ ಹಾಸ್ಯಾಸ್ಪದವಾಗಿದೆ" ಎಂದಿದ್ದಾರೆ.
ಲಡಾಖ್ ಪ್ರದೇಶದಲ್ಲಿ ಕಳೆದ ಜೂನ್ನಲ್ಲಿ ಭಾರತ ಹಾಗೂ ಚೀನಿ ತುಕಡಿಗಳ ನಡುವೆ ಘರ್ಷಣೆ ನಡೆದ ನಂತರ ಮೇಲ್ಮನೆಯಲ್ಲಿ ವಿಪಕ್ಷಗಳು ಈ ವಿಚಾರವನ್ನು ಉಲ್ಲೇಖಿಸುತ್ತಾ ಬಂದಿವೆ.
"ಯಾರೊಬ್ಬರೂ ಭಾರತದ ಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಕರೆದಿದ್ದ ಸರ್ವಪಕ್ಷಗಳ ನಿಯೋಗಕ್ಕೆ ಹೇಳಿದ್ದರು.
ಸೂಕ್ಷ್ಮ ವಿಷಯಗಳನ್ನು ಒಳಗೊಂಡ ವಿಚಾರಗಳ ಕುರಿತು ಸಂಬಂಧಪಟ್ಟ ಇಲಾಖೆ ನೀಡುವ ಸೂಚನೆಗಳ ಅನ್ವಯ ರಾಜ್ಯ ಸಭಾ ಸೆಕ್ರೇಟರಿಯೇಟ್ ಕೆಲಸ ಮಾಡುವುದಾಗಿ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.