ಬೆಂಗಳೂರು, ನ. 02 (DaijiworldNews/HR): ಕೊರೊನಾ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರ ಮನವೊಲಿಸಲಾಗುತ್ತದೆಯೇ ಹೊರತು ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊರೊನಾ ತಾಂತ್ರಿಕ ಸಲಹಾ ಸಮಿತಿ ಎರಡು ಡೋಸ್ ಲಸಿಕೆ ಪಡೆಯದವರಿಗೆ ಸರ್ಕಾರದಿಂದ ಕೊಡುವ ಸೌಲಭ್ಯಗಳನ್ನು ಕಡಿತ ಮಾಡಬೇಕು ಮತ್ತು ದಂಡ ಹಾಕಬೇಕು ಎಂಬ ಸಲಹೆಗಳನ್ನು ನೀಡಿತ್ತು. ಆದರೆ ಸರ್ಕಾರ ಹಾಗೆ ಮಾಡುವುದಿಲ್ಲ. ಬದಲಿಗೆ ಲಸಿಕೆ ಪಡೆಯದಿರುವವರ ಮನವೊಲಿಸಿ ಲಸಿಕೆ ಪಡೆಯುವಂತೆ ಮಾಡಲಾಗುತ್ತದೆ" ಎಂದರು.
ಇನ್ನು ಕೊರೊನಾ ಪ್ರಕರಣಗಳು ಹೆಚ್ಚುವುದನ್ನು ತಡೆಯಲು ಟೆಲಿಮೆಡಿಸಿನ್, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಸಾರ್ವಜನಿಕರು ಸರ್ಕಾರದ ಜತೆಗೆ ಕೈ ಜೋಡಿಸಿದರೆ ಕೊರೊನಾದಿಂದ ಹೊರಬರಬಹುದು" ಎಂದು ಹೇಳಿದ್ದಾರೆ.