ಭೋಪಾಲ, ಡಿ.02 (DaijiworldNews/PY): ಕಣ್ಣೆದುರೇ ತನ್ನ ಮಗನನ್ನು ಹೊತ್ತೊಯ್ದ ಚಿರತೆಯೊಂದಿಗೆ ಹೋರಾಡಿ ತಾಯಿ, ಮಗನನ್ನು ಸಾವಿನ ದವಡೆಯಿಂದ ಪಾರು ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಿಧಿ ಜಿಲ್ಲೆಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಬಳಿಯ ಹಳ್ಳಿಯೊಂದರ ಬುಡಕಟ್ಟು ಮಹಿಳೆ ಕಿರಣ, ಭಾನುವಾರ ರಾತ್ರಿ ತನ್ನ ಮೂರು ಮಕ್ಕಳೊಂದಿಗೆ ಮನೆಯ ಹೊರಗೆ ಬೆಂಕಿಯಿಂದ ಚಳಿ ಕಾಯಿಸುತ್ತಾ ಕುಳಿತಿದ್ದಳು, ಈ ಸಂದರ್ಭ ಎಗರಿದ ಚಿರತೆ 6 ವರ್ಷದ ಬಾಲಕ ರಾಹುಲ್ ಅನ್ನು ಹೊತ್ತೊಯ್ದಿದೆ. ಕೂಡಲೇ ಎಚ್ಚೆತುಕೊಂಡ ಕಿರಣ, ಇಬ್ಬರು ಮಕ್ಕಳನ್ನು ಮನೆಯೊಳಗೆ ಕಳುಹಿಸಿ ಕಾಡಿನತ್ತ ಓಡಿದ್ದಾರೆ.
ಚಿರತೆಯೊಂದಿಗೆ ಹೋರಾಡಿ ಮಗನನ್ನು ಸಾವಿನ ದವಡೆಯಿಂದ ರಕ್ಷಿಸಿ, ಮನೆಗೆ ಕರೆತಂದಿದ್ದಾರೆ.
ಘಟನೆಯಲ್ಲಿ ತಾಯಿ ಹಾಗೂ ಮಗನಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಕಿರಣ ಅವರ ಸಾಹಸಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.