ಮುಂಬೈ, ಡಿ.02 (DaijiworldNews/PY): ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ದ ಹರಿ ಹಾಯ್ದಿದ್ದು, "ನಟ ಶಾರುಖ್ ಬಿಜೆಪಿಯ ಕ್ರೂರಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಯ ಸಂತ್ರಸ್ತರಾಗಿದ್ದಾರೆ" ಎಂದು ಹೇಳಿದ್ದಾರೆ.
ಮುಂಬೈ ಪ್ರವಾಸದಲ್ಲಿರುವ ಅವರು, ಪೌರ ಸಮುದಾಯದೊಂದಿಗೆ ಸಂವಹನ ನಡೆಸಿದ್ದು, ಈ ಸಂದರ್ಭ ನಟರಾದ ಶತ್ರುಘ್ನ ಸಿನ್ಹಾ, ರಿಚಾ ಚಡ್ಡಾ, ಸ್ವರಾ ಭಾಸ್ಕರ್, ಚಿತ್ರ ನಿರ್ಮಾಣಕಾರ ಮಹೇಶ್ ಭಟ್, ಸಂಕಲನಕಾರ ಜಾವೇದ್ ಅಖ್ತರ್, ಕಾಮಿಡಿಯನ್ ಮುನಾವರ್ ಫರೂಖಿ, ಸುದೀಂಧ್ರ ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮಮತಾ, "ಮಾನವ ಶಕ್ತಿಯನ್ನು ಭಾರತ ಇಷ್ಟಪಡುತ್ತದೆಯೇ ಹೊರತು ತೋಳ್ಬಲವನ್ನಲ್ಲ. ದುರಾದೃಷ್ಟವಶಾತ್ ನಾವೀಗ ಬಿಜೆಪಿಯ ಕ್ರೂರಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಅನೈತಿಕ ವರ್ತನೆಯನ್ನು ಎದುರಿಸುತ್ತಿದ್ದೇವೆ" ಎಂದಿದ್ದಾರೆ.
ಮಹೇಶ್ ಭಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಮಹೇಶ್ ಭಟ್ ಅವರನ್ನು ಸಂತ್ರಸ್ತರನ್ನಾಗಿ ಮಾಡಲಾಯಿತು ಎನ್ನುವುದು ನನಗೆ ತಿಳಿದಿದೆ. ಶಾರುಖ್ ಕೂಡಾ ತೊಂದರೆ ಅನುಭವಿಸಿದ್ದಾರೆ" ಎಂದು ಹೇಳಿದ್ದಾರೆ.
ಮುಂಬೈ ಬಳಿ ಕ್ರೂಸ್ ಹಡಗೊಂದರ ಮೇಲೆ ದಾಳಿ ಮಾಡಿದ್ದ ಎನ್ಸಿಬಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಆತನ ಸಹಚರರನ್ನು ಬಂಧಿಸಿತ್ತು. ಆರ್ಯನ್ ಖಾನ್ ಬಾಂಬೆ ಹೈಕೋರ್ಟ್ನಿಂದ ಜಾಮೀನು ಪಡೆದುಕೊಂಡಿದ್ದು, ಒಂದು ತಿಂಗಳ ಸೆರೆವಾಸ ಮುಗಿಸಿ ಹೊರ ಬಂದಿದ್ದಾರೆ.