ಬೆಳಗಾವಿ, ಡಿ.02 (DaijiworldNews/PY): "ಡಿಸೆಂಬರ್ 14ರ ಬಳಿಕ ನಾನು ಏನೆಂಬುದನ್ನು ತೋರಿಸುತ್ತೇನೆ. ವಾರ್ ಆದರೂ ನನಗೆ ಚಿಂತೆ ಇಲ್ಲ" ಎಂದು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಏನೇ ಆರೋಪ ಮಾಡಿದರೂ ಸಹ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈಗ ನಾನು ಚುನಾವಣೆಯ ಮೂಡ್ನಲ್ಲಿದ್ದೇನೆ" ಎಂದಿದ್ದಾರೆ.
"ಒಂದು ಗಂಟೆ ಸುದ್ದಿಗೋಷ್ಠಿ ನಡೆಸಿ ಡಿಕೆಶಿ ಹಾಗೂ ಜಾರಕಿಹೊಳಿ ಕುಟುಂಬ ನಡುವೆ ಏನು ಇತ್ತು ಎನ್ನುವ ಕುರಿತು ಹೇಳುತ್ತೇನೆ. 1985ರಿಂದ ಈವರೆಗೆ ನಡೆದ ಎಲ್ಲಾ ವಿಚಾರಗಳ ಕುರಿತು ಬಹಿರಂಗವಾಗಿ ಮಾತನಾಡುತ್ತೇನೆ. ಆಗ ನನ್ನ ವ್ಯಕ್ತಿತ್ವ ಏನು ಡಿಕೆಶಿ ವ್ಯಕ್ತಿತ್ವ ಏನು ಎನ್ನುವುದು ತಿಳಿಯುತ್ತದೆ. ಎಲ್ಲದಕ್ಕೂ ಫಲಿತಾಂಶದ ದಿನ ಉತ್ತರ ಕೊಡುತ್ತೇನೆ. ಓಪನ್ ವಾರ್ ಆದರೂ ಚಿಂತೆ ಇಲ್ಲ" ಎಂದು ಕಿಡಿಕಾರಿದ್ದಾರೆ.
"ನಾನು ಬೇರೆಯವರ ರೀತಿ ಹತಾಶ ಮನೋಭಾವದಿಂದ ಮಾತನಾಡುವುದಿಲ್ಲ. ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ನನ್ನ ವ್ಯಕ್ತಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎನ್ನುವುದನ್ನು ಹೇಳುತ್ತೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.