ಬೆಂಗಳೂರು, ಡಿ. 01 (DaijiworldNews/HR): ಎಸ್.ಆರ್.ವಿಶ್ವನಾಥ್ ರೌಡಿಗಳ ಜೊತೆ ಓಡಾಡುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಎಸ್.ಆರ್.ವಿಶ್ವನಾಥ್, ಡಿ.ಕೆ.ಶಿ ಅವರೇನು ಸಾಧು-ಸಂತರ ಜೊತೆ ಓಡಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರು ತಮ್ಮ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, "ಡಿ.ಕೆ.ಶಿವಕುಮಾರ್ ಏನು ಎಂಬುದು ಎಲ್ಲರಿಗೂ ಗೊತ್ತು. ಅವರೇನು ಸಾಧು-ಸಂತರ ಜೊತೆ ಓಡಾಡ್ತಾರಾ? ಒಬ್ಬ ಶಾಸಕರ ಹತ್ಯೆಗೆ ಸುಪಾರಿ ಕೊಟ್ಟಂತವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದ ಮೇಲೆ ಅರ್ಥ ಮಾಡಿಕೊಳ್ಳಬೇಕು" ಎಂದರು.
ಇನ್ನು "ಡಿ.ಕೆ.ಶಿವಕುಮಾರ್ ಏನು? ಅವರ ಹಿನ್ನೆಲೆ ಏನು ಎಂಬುದು ಎಲ್ಲರಿಗೂ ಗೊತ್ತು. ಅವರ ಬಗ್ಗೆ ಈಗ ನಾನು ಮಾತನಾಡಲ್ಲ. ಯಾಕೆಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುವವರು, ತುಂಬಾ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡವರು. ಹಾಗಾಗಿ ಗೌರವಾನ್ವಿತ ಸ್ಥಾನದಲ್ಲಿರುವವರ ಬಗ್ಗೆ ನಾನು ಏನೂ ಹೇಳಲ್ಲ" ಎಂದು ಹೇಳಿದ್ದಾರೆ.