ಬೆಳಗಾವಿ, ಡಿ.01 (DaijiworldNews/PY): ಕೈ ನಾಯಕರ ವಿರುದ್ದ ವಿಧಾನಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದು, "ಅಕ್ರಮ ಎಸಗುವವರೇ ಕಾಂಗ್ರೆಸ್ಸಿಗರು. ಅವರು ಕೈಗೆ ಮಸಿ ಹಚ್ಚಿಕೊಂಡು ಬೇರೆಯವರ ಮುಖಕ್ಕೆ ಬಳಿಯುತ್ತಾರೆ" ಎಂದಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದಿನಿಂದಲೂ ಸಹ ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ನಮ್ಮನ್ನು ಎಲ್ಲಾ ಜಾತಿಯವರೂ ಬೆಂಬಲಿಸುತ್ತಾರೆ" ಎಂದು ತಿಳಿಸಿದ್ದಾರೆ.
"20 ವರ್ಷಗಳಿಂದ ನಾವೆಲ್ಲರೂ ಕುಟುಂಬದ ರೀತಿ ಇದ್ದೇವೆ. ಪಂಚಾಯತ್ ಅಥವಾ ಗ್ರಾಮ ಕೆಲಸವಿರಲಿ ಮಾಡಿಸಿಕೊಡುತ್ತೇವೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸಬೇಕು" ಎಂದಿದ್ದಾರೆ.
"ಸತೀಶ ಜಾರಕಿಹೊಳಿ ಓರ್ವ ಚುನಾಯಿತ ಜನಪ್ರತಿನಿಧಿ. ಮಾರ್ಗಸೂಚಿಯಲ್ಲಿ ಅವಕಾಶವಿದ್ದರೆ ಮತಗಟ್ಟೆ ಏಜೆಂಟ್ ಆಗುವುದಾದರೆ ಆಗಲಿ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ನಾವ್ಯಾರೂ ಸಹ ಮತ ಚಲಾಯಿಸುವುದಿಲ್ಲ" ಎಂದು ಹೇಳಿದ್ದಾರೆ.
"ನನ್ನನ್ನು ಗೆಲ್ಲಿಸಿದರೆ, ನಿಮಗಿರುವ ಮಹತ್ವವನ್ನು ಇನ್ನೂ ಸಹ ಆರು ವರ್ಷಗಳ ಕಾಲ ಹಾಗೆಯೇ ಇರುವಂತೆ ನೋಡಿಕೊಳ್ಳುತ್ತೇನೆ. ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ" ಎಂದಿದ್ದಾರೆ.
ಲಖನ್ ಬಿಜೆಪಿಯ ಬಿ ಟೀಂ ಎಂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಯಾವಾಗಲೂ ನಾವು ಎ ಟೀಂ ಮತ್ತು ಎ 1. ಅವರೇ, ಬಿ, ಸಿ ಟೀಂ" ಎಂದು ತಿರುಗೇಟು ನೀಡಿದ್ದಾರೆ.
"ಜನರೊಂದಿಗೆ ನಾನು ಯಾವಾಗಲೂ ಸಂಪರ್ಕದಲ್ಲಿರುತ್ತೇನೆ. ನಾನು ಸರಳವಾಗಿಯೇ ಇರುತ್ತೇನೆ. ನನ್ನ ಬಳಿ ಸಹ ವಾಹನಗಳಿವೆ. ನಾವೂ ಸಹ ಹಿಂದೆ, ಮುಂದೆ ನಾಲ್ಕು ವಾಹನಗಳನ್ನು ತರಬಹುದು. ಆದರೆ, ಅದೆಲ್ಲಾ ಯಾವುದೂ ಬೇಡ. ನಾನು ಒಬ್ಬನೇ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ" ಎಂದು ತಿಳಿಸಿದ್ದಾರೆ.