ನವದೆಹಲಿ, ಡಿ.01 (DaijiworldNews/PY): "ಕೇಂದ್ರದ ಮೂರು ಕೃಷಿ ಕಾಯ್ದೆ ವಿರುದ್ದ ರೈತರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಮೃತಪಟ್ಟ ರೈತರ ಅಂಕಿ-ಅಂಶಗಳ ದಾಖಲೆ ಇಲ್ಲದ ಕೇಂದ್ರ ಸರ್ಕಾರದ ಬಳಿ ಕೊರೊನಾ ಸಾಂಕ್ರಾಮಿಕದ ವೇಳೆ ಮೃತಪಟ್ಟ ಲಕ್ಷಗಟ್ಟಲೆ ಜನರ ಸಾವಿನ ಅಂಕಿ-ಅಂಶಗಳನ್ನು ಹೇಗೆ ಬಂದವು?" ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ಧಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಹೇಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
"ಕೃಷಿ ಕಾಯ್ದೆಗಳ ವಿರುದ್ದ ನಡೆಸಿದ ಪ್ರತಿಭಟನೆಯ ಸಂದರ್ಭ 700ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ. ರೈತರ ಸಾವಿನ ಅಂಕಿ-ಅಂಶಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಅವರಿಗೆ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಹೇಗೆ ಹೇಳಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
"ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಸಂಭವಿಸಿದ ರೈತರ ಸಾವಿನ ಅಂಕಿ-ಅಂಶ ಸರ್ಕಾರದ ಬಳಿ ಇಲ್ಲ ಎಂದರೆ, ಕೊರೊನಾ ಸಾಂಕ್ರಾಮಿಕದ ಸಂದರ್ಭ ಲಕ್ಷಗಟ್ಟಲೆ ಜನರ ಸಾವಿನ ಅಂಕಿ-ಅಂಶಗಳನ್ನು ಹೇಗೆ ಸಂಗ್ರಹಿಸಿದರು?" ಎಂದು ಕೇಳಿದ್ದಾರೆ.
"ದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸುಮಾರು 50 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ಧಾರೆ. ಆದರೆ, ಕೇಂದ್ರ ಸರ್ಕಾರದ ಪ್ರಕಾರ, ಕೇವಲ 4 ಲಕ್ಷ ಮಂದಿ ಮಾತ್ರ ಸಾವನ್ನಪ್ಪಿದ್ಧಾರೆ" ಎಂದು ಟೀಕಿಸಿದ್ದಾರೆ.
"ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಸಂಭವಿಸಿದ ರೈತರ ಸಾವಿನ ಅಂಕಿ-ಅಂಶ ಸರ್ಕಾರದ ಬಳಿ ಇಲ್ಲ. ಅಲ್ಲದೇ, ಕೃಷಿ ಕಾಯ್ದೆಯನ್ನು ಈಗ ರದ್ದುಪಡಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆಯಲ್ಲಿ ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಪರಿಹಾರ ನೀಡುವ ಪ್ರಶ್ನೆಯೇ ಬರುವುದಿಲ್ಲ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.