ಬೆಂಗಳೂರು, ಡಿ.01 (DaijiworldNews/PY): "ಸುಪಾರಿ ಕೊಟ್ಟು ಆಂಧ್ರಪ್ರದೇಶದಿಂದ ಕರೆಸಿ ನನ್ನ ಕೊಲೆಗೆ ಸಂಚು ರೂಪಿಸಿದ್ದು, ತೋಟಕ್ಕೆ ಹೋದ ವೇಳೆ ತಲೆಗೆ ಹೊಡೆಯಿರಿ ಎಂದು ಹೇಳಿರುವುದನ್ನು ಕೇಳಿದ್ದೇನೆ" ಎಂದು ಬಿಜೆಪಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ತಿಳಿಸಿದ್ಧಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆಯಲ್ಲಿ ಸೋಲು, ಗೆಲುವು ಇದ್ದಿದ್ದೆ. ಆದರೆ, ನನ್ನ ಮೇಲೆ ಕಾಂಗ್ರೆಸ್ ಮುಖಂಡ ಗೋಪಾಕೃಷ್ಣ ದ್ವೇಷ ಸಾಧಿಸುತ್ತಿರುವುದು ವಿಡಿಯೋದ ಸಂಭಾಷಣೆಯಿಂದ ತಿಳಿದು ಬರುತ್ತದೆ" ಎಂದಿದ್ದಾರೆ.
"ನಾನು ಸಾವಿಗೆ ಹೆದರುವುದಿಲ್ಲ. ನಿಧಾನವಾದರೂ ಪರವಾಗಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಎಂದು ರಾಜನಕುಂಟೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ" ಎಂದು ತಿಳಿಸಿದ್ಧಾರೆ.
"ನನ್ನ ಹತ್ಯೆಗೆ ಸಂಚು ರೂಪಿಸುತ್ತಿರುವ ವಿಷಯ 15 ದಿನಗಳ ಹಿಂದೆಯೇ ಸೂಕ್ಷ್ಮ ತಿಳಿದಿತ್ತು. ಆದರೆ, ಆ ಬಗ್ಗೆ ವಿಡಿಯೋ ಇರಲಿಲ್ಲ. ಈ ಕುರಿತು ಗೃಹ ಸಚಿವರಿಗೆ ಮೊದಲೇ ತಿಳಿಸಿದ್ದೆ. ಇದೀಗ ವಿಡಿಯೋ ಬಂದ ಬಳಿಕ ವಿಷಯ ಹೊರಗೆ ಬಂದಿದೆ" ಎಂದಿದ್ದಾರೆ.