ನವದೆಹಲಿ, ಡಿ.01 (DaijiworldNews/PY): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ವಿರುದ್ದ ಪ್ರಕರಣ ದಾಖಲಾಗಿದೆ.
ಎಫ್ಐಆರ್ನಲ್ಲಿ ಜುಕರ್ಬರ್ಗ್ ಹೊರತಾಗಿ 49 ಮಂದಿಯನ್ನು ಹೆಸರಿಸಲಾಗಿದೆ. ಜುಕರ್ಬರ್ಗ್ ಅಖಿಲೇಶ್ ಯಾದವ್ ವಿರುದ್ದ ಯಾವುದೇ ಅವಹೇಳನಕಾರಿ ಪೋಸ್ಟ್ ಹಾಕಿಲ್ಲ. ಆದರೆ, ಅಖಿಲೇಶ್ ಯಾದವ್ ಅವರ ವಿರುದ್ದ ಅವಹೇಳನಕಾರಿ ಕಾಮೆಂಟ್ಗಳನ್ನು ಪೋಸ್ಟ್ ಮಾಡಲು ಅವರ ಫೇಸ್ಬುಕ್ ವೇದಿಕೆಯನ್ನು ಬಳಸಿದ್ದರಿಂದ ಎಫ್ಐಆರ್ನಲ್ಲಿ ಅವರ ಹೆಸರಿದೆ.
ಕನೌಜ್ ಜಿಲ್ಲೆಯ ಸರಹತಿ ಗ್ರಾಮದ ನಿವಾಸಿ ಅಮಿತ್ ಕುಮಾರ್ ಅವರು ಜುಕರ್ಬರ್ಗ್ ವಿರುದ್ದ ಹಾಗೂ 49 ಜನರ ವಿರುದ್ಧ ಕನೌಜ್ ಜಿಲ್ಲೆಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬುವಾ ಬಾಬುವಾ ಶೀರ್ಷಿಕೆಯ ಫೇಸ್ಬುಕ್ ಪುಟದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರ ಇಮೇಜ್ಗೆ ಕಳಂಕ ತರುವ ಯತ್ನ ಮಾಡಲಾಗಿದೆ ಎಂದು ಕುಮಾರ್ ನ್ಯಾಯಾಲಯದ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗೆ ಮೇ 25ರಂದು ಅರ್ಜಿ ಕಳುಹಿಸಿದ್ದರು. ಆದರೆ, ಅವರ ಅರ್ಜಿ ನೆನೆಗುದಿಗೆ ಬಿದ್ದಿತ್ತು. ಬಳಿಕ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಫೇಸ್ಬುಕ್ ಸಿಇಒ ಜುಕರ್ ಬರ್ಗ್ ಜೊತೆಗೆ ಫೇಸ್ಬುಕ್ ಪುಟದ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕುಮಾರ್ ಅವರ ಆದೇಶದ ಮೇರೆಗೆ ಮುಖ್ಯ ನ್ಯಾಯಾಧೀಶ ಮ್ಯಾಜಿಸ್ಟ್ರೇಟ್ ಧರಂವೀರ್ ಸಿಂಗ್ ಅವರು ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಹೇಳಿದ್ದಾರೆ.