ರಾಮನಗರ, ಡಿ.01 (DaijiworldNews/PY): "ಕೈ ನಾಯಕರು ಜೆಡಿಎಸ್ ಬೆಂಬಲ ಬೇಡ ಎಂದು ಹೇಳಿದ್ದು ಕರೆಯದೇ ಇರುವವರ ಮನೆ ಬಾಗಿಲಿಗೆ ಹೋಗಲು ಆಗುತ್ತಾ?" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆಯ ಮೈತ್ರಿ ಕುರಿತು ಮಾತುಕತೆ ನಡೆಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ" ಎಂದಿದ್ಧಾರೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ದೇವೇಗೌಡರ ಮೇಲೆ ಪ್ರಧಾನಿ ಮೋದಿ ಅವರಿಗೆ ವಿಶ್ವಾಸ ಹಾಗೂ ಗೌರವ ಇದೆ. ಹಾಸನದ ಐಐಟಿ ಸ್ಥಾಪನೆ ವಿಚಾರದಲ್ಲಿ ದೇವೇಗೌಡರು ಮೋದಿ ಅವರನ್ನು ಭೇಟಿ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಈಗಾಗಲೇ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಬಹಿರಂಗವಾಗಿ ಬೆಂಬಲ ಕೇಳಿದ್ದಾರೆ. ಮೈತ್ರಿ ವಿಚಾರವಾಗಿ ದೇವೇಗೌಡರು ದೆಹಲಿಯಿಂದ ಬಂದ ಬಳಿಕ ಮಾತುಕತೆ ಮಾಡುತ್ತೇನೆ" ಎಂದಿದ್ದಾರೆ.