ನವದೆಹಲಿ, ಡಿ.01 (DaijiworldNews/PY): "ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಸಂಭವಿಸಿದ ರೈತರ ಸಾವಿನ ಅಂಕಿ-ಅಂಶ ಸರ್ಕಾರದ ಬಳಿ ಇಲ್ಲ. ಅಲ್ಲದೇ, ಕೃಷಿ ಕಾಯ್ದೆಯನ್ನು ಈಗ ರದ್ದುಪಡಿಸಲಾಗಿದೆ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆಯ ಸಂದರ್ಭ ಮೃತಪಟ್ಟಿರುವ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಧನ ನೀಡಲಿದೆಯೇ ಎಂದು ವಿಪಕ್ಷಗಳು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, "ಇದಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆಯಲ್ಲಿ ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಪರಿಹಾರ ನೀಡುವ ಪ್ರಶ್ನೆಯೇ ಬರುವುದಿಲ್ಲ" ಎಂದಿದ್ಧಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ರೈತರು ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿದ್ದರು. ಈ ಪ್ರತಿಭಟನೆಯ ಸಂದರ್ಭ 700ಕ್ಕೂ ಹೆಚ್ಚು ರೈತರು ಮೃತಪಟ್ಟಿರುವುದಾಗಿ ರೈತ ಮುಖಂಡರು ಆರೋಪಿಸಿದ್ದರು.
ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಬಳಿಕ ನವೆಂಬರ್ 29ರಂದು ಸಂಸತ್ ಚಳಿಗಾಲದ ಅಧಿವೇಶನ ಆರಂಭವಾದ ಮೊದಲ ದಿನವೇ ವಿಪಕ್ಷಗಳ ಕೋಲಾಹಲದ ನಡುವೆಯೇ ಕೃಷಿ ಕಾಯ್ದೆಯನ್ನು ರದ್ದುಪಡಿಸುವ ಮಸೂದೆ ಅಂಗೀಕಾರಗೊಂಡಿತ್ತು.