ಚಿಕ್ಕಮಗಳೂರು, ಡಿ 01 (DaijiworldNews/MS): ಚಾರ್ಮಾಡಿ ಘಾಟ್ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಹತ್ಯೆಗೈದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಮೂಡುಗೆರೆಯ ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಎಂದು ಗುರುತಿಸಲಾಗಿದೆ.
ಕೃಷ್ಣೇಗೌಡ ಎಂಬಾತನ ಜೊತೆ ಜೀಪ್ ನಲ್ಲಿ ಹೋಗಿದ್ದ ನಾಗೇಶ್ ಆಚಾರ್ ಕಾಡಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದರು. ಕೃಷ್ಣೇಗೌಡ ನೀಡಿದ ಮಾಹಿತಿಯಂತೆ ಸ್ಥಳೀಯರು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು. ನಾಗೇಶ್ ಆಚಾರ್ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಅವರ ಪತ್ನಿ ಸುಮಾ, ಬಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು
5 ದಿನಗಳ ಹಿಂದೆ ನಾಗೇಶ್ರನ್ನು ಜೀಪ್ನಲ್ಲಿ ಕರೆದುಕೊಂಡು ಹೋಗಿದ್ದ ಕೃಷ್ಣೇಗೌಡ ಕೊಲೆ ಮಾಡಿ, ಮಣ್ಣಿನಡಿ ಹೂತಿಟ್ಟು ಪೊಲೀಸರು, ಸ್ಥಳೀಯರ ಜೊತೆ ಸೇರಿಕೊಂಡು ಹುಡುಕಾಟದ ನಾಟಕವಾಡಿದ್ದಾನೆ . ಪೊಲೀಸರು ಹಾಗೂ ಸಾರ್ವಜನಿಕರು ಚಾರ್ಮಾಡಿ ಅರಣ್ಯದ ಸುತ್ತಮುತ್ತ ಹುಡುಕಾಟ ನಡೆಸುತ್ತಿರುವ ವೇಳೆ ವೇಳೆ ಮಂಗಳವಾರ ರಾತ್ರಿ ಅವರ ಮೃತದೇಹ ಚಾರ್ಮಾಡಿ ಅರಣ್ಯದಲ್ಲಿ ಪತ್ತೆಯಾಗಿದೆ. ಕಾಣೆಯಾಗಿದ್ದ ವ್ಯಕ್ತಿಯ ಮೇಲೆ ಗಂಭೀರ ಗಾಯಗಳಾಗಿದ್ದು, ಆತನನ್ನು ಟಾರ್ಪಾಲಿನಲ್ಲಿ ಸುತ್ತಿ, ಗುಂಡಿ ತೆಗೆದು ಹೂಳಲಾಗಿತ್ತು.
ಪ್ರಕರಣ ಸಂಬಂಧ ಕೃಷ್ಣೇಗೌಡ, ಉದಯ್, ಪ್ರದೀಪ್ ಎಂಬವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.