ಬೆಂಗಳೂರು, ಡಿ.01 (DaijiworldNews/PY): ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಕೊಲೆಗೆ ಸಂಚು ರೂಪಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಿಡಿಎ ಅಧ್ಯಕ್ಷ ಆಗಿರುವ ಎಸ್ ಆರ್ ವಿಶ್ವನಾಥ್ ಅವರನ್ನು ಕೊಲೆ ಮಾಡುವ ಕುರಿತು ಕಾಂಗ್ರೆಸ್ ಮುಖಂಡನೋರ್ವ ಮಾತುಕತೆ ನಡೆಸಿದ್ದಾರೆ.
ಈ ಸಂಬಂಧ ಕುಳ್ಳ ದೇವರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಎಂಬವರನ್ನು ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆಸಿದ್ದು, ವಿಚಾರಣೆ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡ ಎಂ ಎನ್ ಗೋಪಾಲಕೃಷ್ಣ, ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದ್ದು, ಈ ಹಿನ್ನೆಲೆ ಗೋಪಾಲಕೃಷ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ. ಗೋಪಾಲಕೃಷ್ಣ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ವಿಶ್ವನಾಥ್ ವಿರುದ್ದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಎರಡು ಬಾರಿ ಸೋತಿದ್ದರು ಎನ್ನಲಾಗಿದೆ.
ಈ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿದ್ದು, ಎಸ್ ಆರ್ ವಿಶ್ವನಾಥ್ ಅವರನ್ನು ಮುಗಿಸಲು ಸಂಚು ರೂಪಿಸಲಾಗಿದೆಯೋ? ಅಥವಾ ಇಲ್ಲವೋ ದೇವರಾಜ್ ಅವರ ರಾಜಕೀಯ ಭವಿಷ್ಯ ಮುಗಿಸಲು ರಹಸ್ಯ ಕಾರ್ಯಾಚರಣೆ ಅಸ್ತ್ರ ಬಳಸಿದರೋ ಅನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಸ್ ಆರ್ ವಿಶ್ವನಾಥ್ ಕೊಲೆ ಬಗ್ಗೆ ಮಾತನಾಡಿರುವ ಗೋಪಾಲಕೃಷ್ಣ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿರುವ ಕುಳ್ಳ ದೇವರಾಜ್ ಅನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರು ಎಸ್ ಆರ್ ವಿಶ್ವನಾಥ್ ಅವರನ್ನು ಮುಗಿಸುವ ಬಗ್ಗೆ ಮಾತನಾಡಿದ್ದಾರೆ. ಅದನ್ನು ರೆಕಾರ್ಡ್ ಮಾಡಿಕೊಂಡಿರುವುದು ಎಸ್ ಆರ್ ವಿಶ್ವನಾಥ್ ಆಪ್ತ ಕುಳ್ಳ ದೇವರಾಜ್, ಎಸ್ ಆರ್ ವಿಶ್ವನಾಥ್ಗೆ ಒಳ್ಳೆಯವನಾಗುವ ಉದ್ದೇಶದಿಂದ ಕುಳ್ಳ ದೇವರಾಜ್ ಉಪಾಯ ಮಾಡಿ ಸ್ಟಿಂಗ್ ಮಾಡಿದನೇ? ಇಲ್ಲವೇ ಗೋಪಾಲಕೃಷ್ಣ ರಾಜಕೀಯ ಭವಿಷ್ಯ ಮುಗಿಸಲು ರಹಸ್ಯ ಕಾರ್ಯಾಚರಣೆ ಅಸ್ತ್ರ ಬಳಸಿದರೋ ಎನ್ನುವ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.