ರಾಯಪುರ್, ಡಿ.01 (DaijiworldNews/PY): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, "ಬಿಜೆಪಿ ಸುಳ್ಳು ಚಿತ್ರಣವನ್ನು ಮೂಡಿಸಬಹುದು. ಆದರೆ, ಯುಪಿಯಲ್ಲಿನ ಅಪರಾಧ ಅಂಕಿಅಂಶಗಳು ಭಯಾನಕವಾಗಿವೆ" ಎಂದಿದ್ದಾರೆ.
ಗೋರಖ್ಪುರ ಜಿಲ್ಲೆಯಲ್ಲಿ ಏಳು ದಿನಗಳಲ್ಲಿ ಏಳು ಕೊಲೆಗಳು ನಡೆದಿವೆ ಎಂದು ಟ್ವೀಟ್ನಲ್ಲಿ ಮಾಧ್ಯಮದ ವರದಿಯನ್ನು ಉಲ್ಲೇಖಿಸಿರುವ ಅವರು, "ಬಿಜೆಪಿ ಗುಲಾಬಿ ಬಣ್ಣವನ್ನು ಚಿತ್ರಿಸುತ್ತಿರಬಹುದು ಆದರೆ ವಾಸ್ತವದಲ್ಲಿ, ಉತ್ತರಪ್ರದೇಶದಲ್ಲಿನ ಅಪರಾಧ ಅಂಕಿಅಂಶಗಳು ಭಯಾನಕವಾಗಿವೆ" ಎಂದು ಹೇಳಿದ್ದಾರೆ.
"ಮುಖ್ಯಮಂತ್ರಿಗಳ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕ್ರಿಮಿನಲ್ಗಳಿಗೆ ಶರಣಾಗಿದೆ ಎಂದರೆ ರಾಜ್ಯದ ಉಳಿದ ಭಾಗದ ಸ್ಥಿತಿ ಹೇಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು" ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ. ಕೊರೊನಾ ನಿರ್ವಹಣೆಯ ಬಗ್ಗೆ ಯೋಗಿ ಆದಿತ್ಯನಾಥ್ ವಿರುದ್ದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಮೇ ಅಂತ್ಯದಲ್ಲಿ ಬಿಜೆಪಿ ಚುನಾವಣಾ ತಯಾರಿ ಆರಂಭಿಸಿದೆ. ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧ ಚಟುವಟಿಕೆಗಳು ಮಿತಿಮೀರಿವೆ ಎಂದು ದೂರಿದ್ದು, ಇದನ್ನು ಯೊಗಿ ಆದಿತ್ಯನಾಥ್ ಸರ್ಕಾರ ನಿರಾಕರಿಸಿದೆ.