ಮಧುಗಿರಿ, ಡಿ. 01 (DaijiworldNews/HR): ಮೂರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ವ್ಯಕ್ತಿಯ ಶವಸಂಸ್ಕಾರ, ತಿಥಿಕಾರ್ಯ ಎಲ್ಲವನ್ನೂ ಕುಟುಂಬಸ್ಥರು ಮಾಡಿದ್ದು, ಇದೀಗ ಆಶ್ಚರ್ಯ ಎಂಬಂತೆ ಮಂಗಳವಾರದಂದು ಆ ವ್ಯಕ್ತಿ ಗ್ರಾಮದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.
ಮಧುಗಿರಿ ತಾಲೂಕು ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ಅಧ್ಯೆಕ್ಷೆ ಪ್ರೇಮಲತಾ ಅವರ ತಂದೆ ನಾಗರಾಜಪ್ಪ ಎಂಬ ವ್ಯಕ್ತಿಗೆ ಮದ್ಯಪಾನದ ಚಟವಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಾಗರಾಜಪ್ಪ ಮೃತಪಟ್ಟಿದ್ದಾರೆ ಎಂದು ಶವವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಿದ್ದು, ಕುಟುಂಬಸ್ಥರು ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು.
ಆದರೆ ಇದೀಗ ನಾಗರಾಜಪ್ಪ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು, ಕುಟುಂಬಸ್ಥರಲ್ಲಿ ಸಂತಸದೊಂದಿಗೆ ಗೊಂದಲವೂ ಮೂಡಿಸಿದೆ.
ಇನ್ನು ನಾಗರಾಜಪ್ಪನ ಮತ್ತೋರ್ವ ಪುತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದು, ಅಲ್ಲಿಯೇ ತಂದೆ ನಾಗರಾಜಪ್ಪ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದರು. ಮೂರು ತಿಂಗಳ ಹಿಂದೆ ಮಗಳು ಕೆಲಸ ನಿರ್ವಹಿಸುವ ಅದೇ ಆಸ್ಪತ್ರೆಯ ಶವಾಗಾರದಲ್ಲಿ ಇವರ ತಂದೆಯನ್ನೇ ಹೋಲುವ ವ್ಯಕ್ತಿಯ ಮೃತದೇಹವಿತ್ತು. ಆಸ್ಪತ್ರೆ ದಾಖಲೆಗಳ ಪ್ರಕಾರ ಇವರ ತಂದೆಗೆ ಏನೇನು ಕಾಯಿಲೆಗಳಿದ್ದವೋ ಅವೆಲ್ಲಾ ಲಕ್ಷಣ ಮೃತ ವ್ಯಕ್ತಿಯಲ್ಲಿ ಇದ್ದವು. ತಂದೆಯೆಂದೇ ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಇಷ್ಟು ದಿನ ಇವರು ನಿರಾಶ್ರಿತರ ಶಿಬಿರದಲ್ಲಿದ್ದು, ಮನೆಯವರ ನೆನಪು ಕಾಡಿ ಊರಿಗೆ ನಾಗರಾಜಪ್ಪ ವಾಪಸಾಗಿದ್ದಾರೆ ಎನ್ನಲಾಗಿದೆ.