ಬೆಂಗಳೂರು, ಡಿ.01 (DaijiworldNews/PY): "ಕೊರೊನಾ ನಿಯಂತ್ರಿಸಲು ಕಠಿಣ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಆದರೆ, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರವೊಂದಕ್ಕೆ ಸಾಧ್ಯವಾಗುವುದಿಲ್ಲ. ಜನರು ಕೂಡಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು" ಎಂದು ಆರೋಗ್ಯ ಹಾಗೂ ವೈದ್ಯಕೀಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರಲು ಮುಂದಾಗಿದ್ದು, ಇದರೊಂದಿಗೆ ಜನರು ಸಹ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಇದನ್ನು ಸರ್ಕಾರ ಒಂದೇ ನಿಯಂತ್ರಿಸಲು ಸಾಧ್ಯವಿಲ್ಲ. ನಮ್ಮೊಂದಿಗೆ ಜನರು ಸಹ ಕೈಜೋಡಿಸುವುದು ಅಗತ್ಯ" ಎಂದಿದ್ದಾರೆ.
"ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಿರ್ದೇಶನದಂತೆ ಏರ್ಪೋರ್ಟ್ನಲ್ಲಿ ಇಂದಿನಿಂದ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್ಟಿಪಿಸಿಆರ್ ಟೆಸ್ಟ್ ಮಾಡಲು ಆರಂಭ ಮಾಡಿದ್ದೇವೆ. ಈ ಕುರಿತ ಸಿದ್ದತೆಗಳನ್ನು ನಾನೇ ಖುದ್ದಾಗಿ ಏರ್ಪೋರ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಂದಿದ್ದೇನೆ. ಏರ್ಪೋರ್ಟ್ನಲ್ಲಿ ಕೊರೊನಾ ಪರೀಕ್ಷೆ ಆದ ನಂತರ ವರದಿ ಬರುವವರೆಗೂ ಪ್ರಯಾಣಿಕರು ಅಲ್ಲೇ ಇರಬೇಕಾಗುತ್ತದೆ. ನಾಳೆ ಸಿಎಂ ಅವರು ದೆಹಲಿಯಲ್ಲಿ ಆರೋಗ್ಯ ಸಚಿವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ಇದರೊಂದಿಗೆ ಕೊರೊನಾ ವಾರಿಯರ್ಸ್ಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚರ್ಚಿಸುತ್ತಾರೆ" ಎಂದು ಹೇಳಿದ್ದಾರೆ.
ಲಸಿಕೆ ಪಡೆದವರಿಗೆ ಸರ್ಕಾರಿ ಸೌಲಭ್ಯ ನೀಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ರೀತಿಯ ಶಿಫಾರಸ್ಸನ್ನು ಸರ್ಕಾರ ಮಾಡಿಲ್ಲ. ಈ ರೀತಿ ಮಾಡಿದಲ್ಲಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ಆಂದೋಲನ ಮಾಡಿ ಜಾಗೃತಿ ಮೂಡಿಸಿ ಲಸಿಕೆ ಕೊಡುತ್ತೇವೆ. ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಅಗತ್ಯ ಬಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.
"ಓಮ್ರಿಕಾನ್ ವೇಗವಾಗಿ ಹರಡುತ್ತದೆ. ಹಾಗಾಗಿ ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾಲ ಕಾಲಕ್ಕೆ ಮಾರ್ಗಸೂಚಿ ಬದಲಾವಣೆ ಮಾಡುವುದಕ್ಕೆ ತೀರ್ಮಾನ ಮಾಡುತ್ತೇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ಲಸಿಕೆ ನೀಡಲಾಗುತ್ತದೆ. ಲಸಿಕಾ ಮಿತ್ರ ಎನ್ನುವ ಹೆಸರಿನಲ್ಲಿ ಲಸಿಕೆ ನೀಡಲಾಗುತ್ತದೆ. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.