ಹುಬ್ಬಳ್ಳಿ, ಡಿ.01 (DaijiworldNews/PY): "ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ಕೊರೊನಾ ವೈಜ್ಞಾನಿಕ ಪ್ರಗತಿ ಹಾಗೂ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಚರ್ಚೆ ನಡೆಸಲು ಗುರುವಾರ ದೆಹಲಿಗೆ ತೆರಳಲಿದ್ದೇನೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಮೂರನೇ ಅಲೆಯ ಕಳವಳದ ಹಿನ್ನೆಲೆ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ. ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ಡೋಸ್ ನೀಡುವ ಕುರಿತು ಚರ್ಚಿಸುತ್ತೇನೆ. ಒಂದು ಡೋಸ್ ಎನ್ಸಿಬಿಎಸ್ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಬೂಸ್ಟರ್ ನೀಡುವ ಕುರಿತು ನಿರ್ಧರಿಸುತ್ತೇವೆ" ಎಂದಿದ್ದಾರೆ.
ಲಾಕ್ಡೌನ್ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಲಾಕ್ಡೌನ್ ಮಾಡುವ ಪ್ರಸ್ತಾಪವಿಲ್ಲ. ಲಾಕ್ಡೌನ್ ಮಾಡುವುದೂ ಇಲ್ಲ. ಈ ಕುರಿತು ಜನರು ಭೀತಿಗೊಳಗಾಗುವುದು ಬೇಡ. ಕ್ರಿಸ್ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ಸಂದರ್ಭ ನಿರ್ಬಂಧ ಹೇರುವ ಕುರಿತು ನಿರ್ಧರಿಸಿಲ್ಲ" ಎಂದು ತಿಳಿಸಿದ್ದಾರೆ.
"ಈ ಬಾರಿ ಕೊರೊನಾ ವಿಚಾರದಲ್ಲಿ ವಿದೇಶಗಳಿಂದ ಬಂದ 2000-2500 ಮಂದಿಯನ್ನು ಸಂಪೂರ್ಣ ತಪಾಸಣೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ವಿದೇಶದಿಂದ ಬಂದವರನ್ನು ಒಂದು ವಾರ ಗಮನಿಸುತ್ತೇವೆ. ಜಿಲ್ಲಾಧಿಕಾರಿಗಳಿಗೆ, ವಿದೇಶ ಹಾಗೂ ಕೇರಳದಿಂದ ಬಂದವರಿಗೆ ನಿಗಾವಹಿಸಲು ಸೂಚಿಸಿದ್ದೇನೆ. ಕೇರಳದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ತಪಾಸಣೆ ಮಾಡುತ್ತಿದ್ದೇವೆ. ಕೊರೊನಾ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ" ಎಂದಿದ್ದಾರೆ.
"ಕೊರೊನಾ ಕಾರಣದಿಂದ ಹೊಸ ತಾಲೂಕುಗಳಿಗೆ ಮೂಲಸೌಕರ್ಯ ಒದಗಿಸಲು ತಡವಾಗಿದೆ. ಮುಂಬರುವ ದಿನಗಳಲ್ಲಿ ಅವಶ್ಯಕ ಕನಿಷ್ಟ ಸವಲತ್ತು, ಸೌಲಭ್ಯಗಳು, ಕಚೇರಿ ನೀಡುತ್ತವೆ" ಎಂದು ಹೇಳಿದ್ದಾರೆ.
ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ಮಾಡಿ ಹಲವು ವಿಚಾರದ ಬಗ್ಗೆ ಚರ್ಚಿಸಿದ್ದಾರೆ. ಜೆಡಿಎಸ್ ಮೈತ್ರಿ ವಿಚಾರವಾಗಿ ರಾಜ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿ ಎಸ್ ಯಡಿಯೂರಪ್ಪ ಅವರು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದಿದ್ದಾರೆ.