ಚಿತ್ರದುರ್ಗ, ಡಿ.01 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಚಿವ ಶ್ರೀರಾಮುಲು ಲೇವಡಿ ಮಾಡಿದ್ದು, "ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಭಂಡಾಸುರ ಹಾಗೂ ಮೊಂಡಾಸುರರು" ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ, "ಮುಂದಿನ ವಿಧಾನಸಭಾ ಚುನಾವಣೆಯ ನಂತರ ಸಿಎಂ ಆಗಬೇಕು ಎಂದು ಭಂಡಾಸುರ ಹಾಗೂ ಮುಂಡಾಸುರರ ನಡುವೆ ಜಗಳವಾಗುತ್ತಿದೆ. ಈ ಒಳ ಜಗಳವನ್ನು ಮುಚ್ಚಿ ಹಾಕುವ ಸಲುವಾಗಿ ಅವರು ಬಿಜೆಪಿಯ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ" ಎಂದಿದ್ದಾರೆ.
"ಲೋಕಸಭೆ 400 ಸದಸ್ಯರಿದ್ದ ಕಾಂಗ್ರೆಸ್ ಇದೀಗ 50ಕ್ಕೆ ತಲುಪಿದೆ. ಇಂತಹ ಸಂದರ್ಭ ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಬಂಡಾಸುರ ಡಿ ಕೆ ಶಿವಕುಮಾರ್ ಹೇಳಿದ್ದಾರೆ" ಎಂದು ತಿಳಿಸಿದ್ದಾರೆ.
"ಬಿಜೆಪಿಯ ಎಲ್ಲಾ ನಾಯಕರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ಬಿಜೆಪಿಯಲ್ಲಿ ಯಾವುದೇ ರೀತಿಯಾದ ಆಂತರಿಕ ಕಚ್ಚಾಟವಿಲ್ಲ. ರಾಜ್ಯದಲ್ಲಿ ಮುಂದಿನ ಬಾರಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ" ಎಂದು ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಕಾಂಗ್ರೆಸ್ಸಿಗರು ದೊಡ್ಡ ನಾಯಕರಾಗಲು ಪೈಪೋಟಿ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಇದಕ್ಕೆ ಮತದಾರರು ಪಾಠ ಕಲಿಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ಅವರ ಭ್ರಮೆ. ದೇಶದಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿಯಲ್ಲ ಇದೆ" ಎಂದು ಟೀಕಿಸಿದ್ದಾರೆ.