ಬೆಂಗಳೂರು, ಡಿ 01 (DaijiworldNews/MS): ರಾಜ್ಯದ ಬಿಜೆಪಿ ಸಂಸದರು ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆಗೆ ರಾಜ್ಯ ಬಿಜೆಪಿಯೂ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್ ಎಂದು ಹೇಳಿದೆ.
ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿರುವ ಬಿಜೆಪಿ, "ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ನಡೆಸುವುದಕ್ಕೂ ಪೈಪೋಟಿ ಇದೆ ಖಂಡ್ರೆಯವರೇ, ಏಕೋ ನಿಮ್ಮ ವೇಗ ಕಡಿಮೆಯಾಯ್ತು, ಹೀಗಾಗಿ ಇನ್ನೂ ಕಾರ್ಯಾಧ್ಯಕ್ಷ ಸ್ಥಾನದಲ್ಲೇ ಇದ್ದೀರಿ. ಪಾದಕ್ಕೆ ಎರಗುವ ಪರಿ ಹೇಗೆಂಬುದನ್ನು ಡಿಕೆಶಿ ಅವರನ್ನು ನೋಡಿ ಕಲಿಯಿರಿ" ಎಂದು ವ್ಯಂಗ್ಯವಾಡಿದೆ.
ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್. ನೆಹರು, ಇಂದಿರಾ, ರಾಜೀವ್ ಮತ್ತು ಸೋನಿಯಾ ಗಾಂಧಿಯವರ ಪದತಲದಲ್ಲಿ ಗುಲಾಮಗಿರಿ ಮಾಡಿದ್ದಕ್ಕಾಗಿಯೇ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಮಹಾನುಭಾವರ ಪಟ್ಟಿ ಬೇಕೇ ಖಂಡ್ರೆಯವರೇ? ಕುಟುಂಬ ಭಜಕರು ಎಂದು ತಿರುಗೇಟು ನೀಡಿದೆ.