ಬೆಂಗಳೂರು, ನ. 30 (DaijiworldNews/SM): ವಿದೇಶದಿಂದ ಬಂದವರಿಗೆ 7 ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮವನ್ನು ಸರಕಾರ ಜಾರಿಗೊಳಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಪ್ರತಿನಿತ್ಯ ರಾಜ್ಯಕ್ಕೆ 2,500 ಮಂದಿ ಆಗಮಿಸುತ್ತಿದ್ದಾರೆ. ಬರುವ ಎಲ್ಲಾ ಪ್ರಯಾಣಿಕರಿಗೆ ಇದೀಗ ಆರ್ ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಪ್ರತಿಯೊಬ್ಬ ಪ್ರಯಾಣಿಕರಿಗೂ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಲ್ಲಿ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಗೆ ಒಳಪಡಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಅವರನ್ನು 7ನೇ ದಿನ ಮತ್ತೆ ಪರೀಕ್ಷೆಗೆ ಒಳಪಡಿಸಿ ಮತ್ತೆ 7ನೇ ದಿನದಂದು ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ನಡುವೆ ಪಾಸಿಟಿವ್ ಬಂದವರಿಗೆ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಹಾಗೂ ಐದನೇ ದಿನದಂದು ಅವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುವುದೆಂದು ನಿರ್ಧಾರ ಕೈಗೊಳ್ಳಲಾಗಿದೆ.