ನವದೆಹಲಿ, ನ 30 (DaijiworldNews/MS): ರಾಜ್ಯಸಭೆಯಿಂದ ಅಮಾನತುಗೊಂಡಿರುವ ಪ್ರತಿಪಕ್ಷಗಳ 12 ಸಂಸದರು ಯಾವುದೇ ಕಾರಣಕ್ಕೂ ಕ್ಷಮೆಯನ್ನು ಕೇಳುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಳೆದ ಅಧಿವೇಶನದಲ್ಲಿ( ಮುಂಗಾರು ಅಧಿವೇಶನದಲ್ಲಿ) ಅನುಚಿತ, ಅಶಿಸ್ತಿನ ವರ್ತನೆ ತೋರಿಸಿದ್ದಕ್ಕಾಗಿ ಪ್ರತಿಪಕ್ಷ ಸದಸ್ಯರನ್ನು ಸೋಮವಾರ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿತ್ತು. ಅಮಾನತುಗೊಂಡವರಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಐ-ಎಂ ಮತ್ತು ಶಿವಸೇನಾ ಸಂಸದರು ಸೇರಿದ್ದರು.
ರಾಜ್ಯಸಭಾ ಅಧ್ಯಕ್ಷರ ಕ್ಷಮೆಯಾಚಿಸಿದರೆ ಸಂಸದರ ಅಮಾನತು ರದ್ದುಗೊಳಿಸಲು ಸರ್ಕಾರ ಸಿದ್ಧವಾಗಿದೆ ಎಂದು ಮಂಗಳವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದರು.
ಇದನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ " ಯಾವುದಕ್ಕಾಗಿ ಕ್ಷಮೆಯಾಚಿಸಬೇಕು? ಸಂಸತ್ತು ಇರುವುದು ಜನರ ಸಮಸ್ಯೆಗಳನ್ನು ಪ್ರಸ್ತಾಪ ಮಾಡಲು. ಕ್ಷಮೆಯನ್ನು ಯಾವುದೇ ಕಾರಣಕ್ಕೂ ಕೇಳುವುದಿಲ್ಲ' ಎಂದಿದ್ದಾರೆ. ಇನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಕ್ಷಮೆಯಾಚನೆಯನ್ನು ತಳ್ಳಿಹಾಕಿದ್ದಾರೆ.
"ಇದು ಪ್ರಜಾಪ್ರಭುತ್ವ ವಿರೋಧಿ, ಕಾನೂನುಬಾಹಿರ ಮತ್ತು ಅಸಂವಿಧಾನಿಕವಾಗಿದೆ. ಯಾವುದಕ್ಕೆ ಕ್ಷಮೆ ಯಾಚನೆ ಮಾಡಬೇಕು ?ಈ ಕ್ರಮವು ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ" ಎಂದು ಆರ್ಜೆಡಿ ಸಂಸದ ಮನೋಜ್ ಝಾ ಹೇಳಿದ್ದಾರೆ.