ನವದೆಹಲಿ, ನ. 30 (DaijiworldNews/HR): ಸಂಸತ್ನ ಚಳಿಗಾಲದ ಅಧಿವೇಶನದಿಂದ ಅಮಾನತುಗೊಂಡಿರುವ 12 ಮಂದಿ ಶಾಸಕರು ಕ್ಷಮೆ ಕೇಳಿದರೆ ನಿರ್ಧಾರ ಮರುಪರಿಶೀಲಿಸಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಸರ್ಕಾರವು ಹಲವು ಪ್ರಮುಖ ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲಿದ್ದು, ವಿರೋಧಪಕ್ಷದವರಿಗೆ ಮುಕ್ತ ಆಹ್ವಾನ ನೀಡಿದೆ. ಶಾಂತಿಯುತವಾಗಿ ಕಲಾಪ ನಡೆಯಲಿ ಎಂದಷ್ಟೇ ಸರ್ಕಾರ ಹೇಳುತ್ತಿದೆ" ಎಂದರು.
ಇನ್ನು ಸಂಸತ್ನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷದ 12 ಸಂಸದರನ್ನು ಸರ್ಕಾರವು ತಂದ ನಿರ್ಣಯದ ಮೂಲಕ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ಫೂಲೋ ದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್ ಮತ್ತು ಕಾಂಗ್ರೆಸ್ನ ಅಖಿಲೇಶ್ ಪ್ರಸಾದ್ ಸಿಂಗ್, ದೋಲಾ ಸೇನ್, ತೃಣಮೂಲ ಕಾಂಗ್ರೆಸ್ನ ಶಾಂತಾ ಛೆಟ್ರಿ, ಪ್ರಿಯಾಂಕಾ ಚತುರ್ವೇದಿ, ಶಿವಸೇನೆಯ ಅನಿಲ್ ದೇಸಾಯಿ,ಸಿಪಿಎಂನ ಎಳಮರಮ್ ಕರೀಂ, ಮತ್ತು ಸಿಪಿಐನ ಬಿನೋಯ್ ವಿಶ್ವಂ ಅಮಾನುತುಗೊಂಡ ಸಂಸದರು.