ನವದೆಹಲಿ, ನ. 30 (DaijiworldNews/HR): ಭಾರತೀಯ ನೌಕಾಪಡೆಗೆ ವೈಸ್ ಅಡ್ಮಿರಲ್ ಆರ್. ಹರಿ ಕುಮಾರ್ ಅವರನ್ನು ನೌಕಾಪಡೆಯ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದ್ದು, ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಹರಿ ಕುಮಾರ್ ಅವರು ಭಾರತೀಯ ನೌಕಾಪಡೆಯ ಅಡ್ಮಿರಲ್ ಕರಂಬಿರ್ ಸಿಂಗ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದು, ಕಳೆದ 39 ವರ್ಷಗಳ ವೃತ್ತಿ ಜೀವನದಲ್ಲಿ ಹರಿ ಕುಮಾರ್ ಅವರು ವಿವಿಧ ಕಮಾಂಡರ್, ಸಿಬ್ಬಂದಿ ಮತ್ತು ಬೋಧನಾ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಹರಿ ಕುಮಾರ್ ಅವರು 1962ರ ಏಪ್ರಿಲ್ 12ರಂದು ಜನಿಸಿದ್ದು, 1981ರ ಡಿಸೆಂಬರ್ ನಲ್ಲಿ ಎ-ಸ್ಕ್ವಾಡ್ರನ್, 61 ಕೋರ್ಸ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಪದವಿ ಪಡೆದ ಇವರು 1983ರ ಜನವರಿ 1ರಂದು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನೇಮಕಗೊಂಡಿದ್ದರು.
ಆರ್. ಹರಿ ಕುಮಾರ್ ಅವರ ಸೇವೆಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಕೂಡ ಲಭಿಸಿದೆ.