ಬೆಂಗಳೂರು, ನ 30 (DaijiworldNews/MS): "ಕೊರೊನಾ ರೂಪಾಂತರಿ ‘ಒಮಿಕ್ರಾನ್’ ಆತಂಕ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ, ಕಾಲೇಜುಗಳು, ಸಾರ್ವಜನಿಕ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಚಟುವಟಿಕೆಯನ್ನು ನಿರ್ಬಂಧಿಸುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ಕ್ರಿಸ್ಮಸ್, ಹೊಸ ವರ್ಷಾಚರಣೆ, ವಿಧಾನಮಂಡಲದ ಬೆಳಗಾವಿ ಅಧಿವೇಶನ ನಡೆಸುವ ವಿಷಯದಲ್ಲಿ ಬದಲಾವಣೆ ಕುರಿತಂತೆ ಡಬ್ಲ್ಯುಎಚ್ಓ ವರದಿ ಆಧಾರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಮಂಗಳವಾರ ನಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, " ಓಮೈಕ್ರಾನ್ ತಳಿಯು ಕಳವಳಕಾರಿ ರೂಪಾಂತರಿಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದು ಆದರೆ ವೈರಾಣುವಿನ ಹರಡುವಿಕೆ ಮತ್ತು ಅದರಿಂದ ಆರೋಗ್ಯದ ಮೇಲೆ ಆಗುವ ಹಾನಿ ಕುರಿತು ಈವರೆಗೂ ಅಧ್ಯಯನ ವರದಿ ಪ್ರಕಟವಾಗಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಡಬ್ಲುಎಚ್ಓ ಅಧ್ಯಯನ ವರದಿ ಪ್ರಕಟವಾಗುವ ನಿರೀಕ್ಷೆ ಇದೆ. ಹೀಗಾಗಿ ಡಬ್ಲ್ಯುಎಚ್ಓ ವರದಿ ಆಧಾರದಲ್ಲೇ ಹೊಸ ಕ್ರಮಗಳ ಕುರಿತು ಯೋಚಿಸಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.
"ಹೊಸ ತಳಿ ಕೊರೊನಾ ತೀವ್ರತೆಯ ಬಗ್ಗೆ ತಿಳಿಯಬೇಕಾಗಿದೆ. ಅದರ ಬಗ್ಗೆ ಚರ್ಚಿಸಲು ತಜ್ಞರಿಗೆ ಸಭೆಗೆ ಬರಲು ಕರೆಯಲಾಗಿದೆ. ಏರ್ಪೋರ್ಟ್, ಬಂದರು, ಅಂತಾರಾಜ್ಯ ಗಡಿಯಲ್ಲೂ ಎಚ್ಚರಿಕೆ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ಮಾಡಲಿದ್ದೇವೆ. ಅಂತರರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆ, ಸೋಂಕಿತರ ಚಿಕಿತ್ಸೆ ಮತ್ತು ಸೋಂಕಿಲ್ಲದವರ ಕ್ವಾರಂಟೈನ್ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು" ಎಂದು ಹೇಳಿದರು.