ಮುಂಬೈ, ನ. 30 (DaijiworldNews/HR): ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ಗೆ ಅವರಿಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದು, ಬಾರ್ ಮಾಲೀಕರಿಂದ ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ಪ್ರಕರಣ ದಾಖಲಿಸಿದ್ದಾರೆ.
ಬಾಂಬೆ ಹೈಕೋರ್ಟ್ ಇಡಿಯಿಂದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಅಕ್ಟೋಬರ್ 29 ರಂದು ದೇಶಮುಖ್ ಅವರ ಮನವಿಯನ್ನು ತಿರಸ್ಕರಿಸಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ ತಿಳಿಸಿತ್ತು.
ಇನ್ನು ಇಡಿ ತನ್ನ ಕಚೇರಿಯಲ್ಲಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ನವೆಂಬರ್ 2 ರಂದು ದೇಶಮುಖ್ ಅವರನ್ನು ಬಂಧಿಸಿದ್ದು, ಇದೀಗ ವಿಶೇಷ ನ್ಯಾಯಾಧೀಶರು ದೇಶಮುಖ್ ಅವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 13 ರವರೆಗೆ ವಿಸ್ತರಿಸಿದ್ದಾರೆ.
2020 -2021ರ ನಡುವೆ ದೇಶ್ಮುಖ್ ಅವರು ಗೃಹ ಸಚಿವರಾಗಿದ್ದಾಗ ವಜಾಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಮೂಲಕ 'ವಿವಿಧ ಆರ್ಕೆಸ್ಟ್ರಾ ಬಾರ್ ಮಾಲೀಕರಿಂದ 4.7 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಇಡಿ ಹೇಳಿದೆ.