ನವದೆಹಲಿ, ನ. 29 (DaijiworldNews/SM): ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆದ ರೈತ ಹೋರಾಟಕ್ಕೆ ಜಯ ಸಿಕ್ಕಿದ್ದು, ಸಂಸತ್ ನ ಉಭಯ ಸದನಗಳಲ್ಲೂ ಮಸೂದೆ ರದ್ದುಗೊಂಡಿದೆ.
ಮಳೆ, ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಕಳೆದ ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಮಣಿದ ಕೇಂದ್ರ ಸರಕಾರ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕರಿಸಿದೆ. ಆ ಮೂಲಕ ರೈತರ ಆಗ್ರಹಕ್ಕೆ ಅಧಿಕೃತ ಮನ್ನಣೆ ಸಿಕ್ಕಿದಂತಾಗಿದೆ.
ಚಳಿಗಾಳದ ಅಧಿವೇಶನ ಆರಂಭಗೊಂಡಿದ್ದು, ಲೋಕಸಭೆ ಕಲಾಪ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಅನ್ನು ಅಂಗೀಕರಿಸಲಾಯಿತು.
ಮಧ್ಯಾಹ್ನ ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಅನ್ನು ಮಂಡಿಸಿದರು. ಮಸೂದೆ ಅಂಗೀಕರಿಸುವ ಮುನ್ನ ಉಪ ಸಭಾಪತಿ ಹರಿವಂಶ ಅವರು, ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎರಡು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಿದರು.