ಬೆಂಗಳೂರು, ನ.29 (DaijiworldNews/PY): "ಭ್ರಷ್ಟಾಚಾರವನ್ನೇ ಉಸಿರಾಡುವ ಬಿಜೆಪಿ 40% ಕಮಿಷನ್ ಹಗರಣ ಮುಚ್ಚಿಕೊಳ್ಳಲು ಸುಳ್ಳಿನ ಸಮಾಧಿ ಅಗೆಯುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಭ್ರಷ್ಟಾಚಾರವನ್ನೇ ಉಸಿರಾಡುವ ಬಿಜೆಪಿ 40% ಕಮಿಷನ್ ಹಗರಣ ಮುಚ್ಚಿಕೊಳ್ಳಲು ಸುಳ್ಳಿನ ಸಮಾಧಿ ಅಗೆಯುತ್ತಿದೆ. ಗೋವಿಂದರಾಜು ಡೈರಿ ಎಂಬ ಹುಸಿ ಕಟ್ಟುಕತೆಯನ್ನು ಸಿಬಿಐ ತನಿಖೆಗೆ ವಹಿಸಿದ್ದು ಕಾಂಗ್ರೆಸ್ ಸರ್ಕಾರವೇ, ತನಿಖೆಗೆ ಆಗ್ರಹಿಸಿದ್ದೂ ಗೋವಿಂದರಾಜುರವರೇ, ಅಂತೆಯೇ 40% ಹಗರಣದ ನ್ಯಾಯಾಂಗ ತನಿಖೆಗೆ ವಹಿಸುವ ಧೈರ್ಯ ತೋರುವುದೇ ಬಿಜೆಪಿ?" ಎಂದು ಪ್ರಶ್ನಿಸಿದೆ.
"ಧರ್ಮ, ಸಂಸ್ಕೃತಿಗಳೆಲ್ಲವೂ ಬಿಜೆಪಿಗೆ ಬೂಟಾಟಿಕೆಯ ತೋರಿಕೆಗಳು ಮಾತ್ರ. ಸಂಜಯ್ ಪಾಟೀಲ್, ರಮೇಶ್ ಜಾರಕಿಹೊಳಿ ಅವರುಗಳು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಳಸುವ ಪದಗಳಿಂದ ಬಿಜೆಪಿಯ ಭೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎಂಬ ಮಾತಿನ ಅರ್ಥವನ್ನು ಬಿಜೆಪಿ ತಿಳಿಯಲಿ" ಎಂದಿದೆ.
ಬಿಜೆಪಿ ಉತ್ತರಿಸಲಿ. 'ಗೋವಿಂದರಾಜು ಡೈರಿ' ಎಂಬ ಸುಳ್ಳಿನ ಕಂತೆ ಇಟ್ಟುಕೊಂಡು ಅಂದು ರೋಷವೇಶ ತೋರಿದ್ದ ಬಿಜೆಪಿ ಸದನದಲ್ಲಿ ಗಪ್ಚುಪ್ ಆಗಿದ್ದೇಕೆ? ಬಿಜೆಪಿಯದ್ದೇ ಡಬಲ್ ಇಂಜಿನ್ ಸರ್ಕಾರವಿದೆ, ಸಿಬಿಐ ತನಿಖೆ ಏನಾಯಿತು? ಹಾಗೆಯೇ ವರಿಷ್ಠರಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎಷ್ಟು ಕಪ್ಪ ಕೊಟ್ಟಿದ್ದರು? 40% ಕಮಿಷನ್ ದಂಧೆಯ ನ್ಯಾಯಾಂಗ ತನಿಖೆಗೆ ಸಿದ್ಧವೇ? ಎಂದು ಕೇಳಿದೆ.