ದಾವಣಗೆರೆ, ನ.29 (DaijiworldNews/PY): "ಮುರುಗೇಶ್ ನಿರಾಣಿ ಅವರು ಮುಂದಿನ ಸಿಎಂ ಆಗುತ್ತಾರೆ ಎಂದು ತಮಾಷೆಗಾಗಿ ಹೇಳಿದ್ದಾಗಿ ಸಚಿವ ಈಶ್ವರಪ್ಪ ಅವರು ಹೇಳಿದ್ದಾರೆ" ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಮುಖೇನ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ" ಎಂದಿದ್ದಾರೆ.
"ಕಾಂಗ್ರೆಸ್ ನಾಯಕ ಎಸ್ ಆರ್ ಪಟೇಲ್ ಬಿಜೆಪಿ ಸೇರುವ ಕುರಿತು ಯಾವುದೇ ಮಾಹಿತಿ ಇಲ್ಲ" ಎಂದು ಹೇಳಿದ್ದಾರೆ.
ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, "ಈಶ್ವರಪ್ಪ ಅವರು ಅಭಿಮಾನ ಪೂರ್ವಕವಾಗಿ ಮುರುಗೇಶ ನಿರಾಣಿ ಸಿಎಂ ಆಗುತ್ತಾರೆ ಎಂದು ಹೇಳಿರಬಹುದು. ಅವರ ಹೇಳಿಕೆಗೆ ನಾನು ಋಣಿಯಾಗಿದ್ದೇನೆ" ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗೇಶ ನಿರಾಣಿ, "ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರು ಕೊರೊನಾ ನಿರ್ವಹಣೆಯಲ್ಲಿ ಶ್ರಮಿಸಿದ್ದಾರೆ. ಅವರ ಕಾರ್ಯಕ್ಕೆ ಸಾಥ್ ನೀಡುವುದು ನಮ್ಮ ಕರ್ತವ್ಯ" ಎಂದು ಹೇಳಿದ್ದಾರೆ.
2023ರಲ್ಲಾದರೂ ಸಿಎಂ ಆಗಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, "ನಮ್ಮ ಪರಿವಾರದ ನಾಯಕರು, ರಾಜ್ಯ, ರಾಷ್ಟ್ರದ ನಮ್ಮ ಪಕ್ಷದ ಹಿರಿಯರು ಯಾವುದೇ ಜವಾಬ್ದಾರಿ ಕೊಡುತ್ತಾರೋ ನಾನು ಅದನ್ನು ಮಾಡಲು ಸಿದ್ದನಿದ್ದೇನೆ ಮುಂದೆ ಏನು ಮಾಡಿದರೂ ಕೂಡಾ 2023-28ರ ನಂತರವೇ" ಎಂದಿದ್ದಾರೆ.