ಬೆಂಗಳೂರು, ನ 29 (DaijiworldNews/MS): ರಾಜ್ಯ ರಾಜಧಾನಿಯಲ್ಲಿ ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು ಟ್ರಾವೆಲ್ಸ್ ಹೆಸರಿನಲ್ಲಿ ಕಾರುಗಳನ್ನ ಬಾಡಿಗೆಗೆ ಪಡೆದು 10 ಕೋಟಿಗೂ ಅಧಿಕ ಮೌಲ್ಯದ 130ಕ್ಕೂ ಕಾರುಗಳ ಸಮೇತ ಆರೋಪಿ ಪರಾರಿಯಾಗಿದ್ದಾನೆ.
ಬಾಗಲುಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಸಂದ್ರದಲ್ಲಿ ಕಳೆದ ಒಂದು ವರ್ಷದ ಹಿಂದೆ ವಂಚಕ ಶಿವಕುಮಾರ್ ಆರ್ಎಸ್ ಟ್ರಾವೆಲ್ಸ್ ಆರಂಭಿಸಿದ್ದನು. ಇನೋವಾ, ಈಟಿಯೋಸ್, ಸ್ವಿಫ್ಟ್ ಕಾರುಗಳನ್ನ ಬಾಡಿಗೆಗೆ ಪಡೆದು ಆರ್ಎಸ್ ಟ್ರಾವೆಲ್ಸ್ ಗೆ ಅಟ್ಯಾಚ್ ಮಾಡಿಕೊಂಡಿದ್ದ. ಪ್ರತಿ ತಿಂಗಳ 8ರಂದು ಕಾರು ಮಾಲೀಕರ ಅಕೌಂಟ್ ಗೆ ಬಾಡಿಗೆ ಹಣ ಹಾಕುವ ಒಪ್ಪಂದ ಮಾಡಿಕೊಂಡಿದ್ದನು. ಅದರಂತೆಯೇ ಮೊದಮೊದಲು ಪ್ರತಿ ತಿಂಗಳ 8 ರಂದು ಅಟ್ಯಾಚ್ ಮಾಡಿದ್ದ ಕಾರು ಮಾಲೀಕರ ಅಕೌಂಟ್ ಗೆ ಬಾಡಿಗೆ ಹಣ ಹಾಕುತ್ತಿದ್ದನು.
ಈತನೊಂದಿಗೆ ವ್ಯವಹಾರ ನಡೆಸಿದವರಿಗೆ ನಂಬಿಕೆ ಮೂಡಿದ್ದರಿಂದ ಹೆಚ್ಚು ಕಾರುಗಳನ್ನು ಅಟ್ಯಾಚ್ ಮಾಡಲಾಗಿತ್ತು.ಆದ್ರೆ ಈ ತಿಂಗಳು ಶಿವಕುಮಾರ್, ಮಾಲೀಕರ ಖಾತೆಗೆ ಹಣ ಹಾಕಿಲ್ಲ. ಮಾಲೀಕರು ಈಬಗ್ಗೆ ವಿಚಾರಿಸಲು ಶಿವಕುಮಾರ್ ಮೊಬೈಲ್ ಗೆ 3-4 ಬಾರಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಕಾರು ಮಾಲೀಕರು ಟ್ರಾವಲ್ಸ್ ಬಳಿ ಬಂದು ನೋಡಿದಾಗ ಕಚೇರಿಗೆ ಬೀಗ ಹಾಕಿರುವುದು ಕಂಡು ಬಂದಿದೆ.
ಆರೋಪಿ 130 ಕ್ಕೂ ಹೆಚ್ಚು ಕಾರುಗಳ ಜೊತೆ ಆರೋಪಿ ಪರಾರಿಯಾಗಿದ್ದಾನೆ.ಸದ್ಯ ಕಾರುಗಳನ್ನ ಅಟ್ಯಾಚ್ ಮಾಡಿದ್ದ ಮಾಲೀಕರು ಹಣವೂ ಇಲ್ಲದೆ ಕಾರು ಇಲ್ಲದೇ ಕಂಗಾಲಾಗಿದ್ದಾರೆ. ಬಗಲಗುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಂಚಕನಿಗಾಗಿ ಬಲೆ ಬೀಸಿದ್ದಾರೆ.