ನವದೆಹಲಿ, ನ.29 (DaijiworldNews/PY): "ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳ ರದ್ದತಿ ಮಸೂದೆ 2021 ಅನ್ನು ಅಂಗೀಕರಿಸಲಾಗಿದೆ. ಆದರೆ, ಇನ್ನೂ ನಮ್ಮ ಬೇಡಿಕೆಗಳು ಪೂರ್ಣವಾಗಿಲ್ಲ" ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕೌಶಂಬಿಯಲ್ಲಿ ಮಾತನಾಡಿದ ಅವರು, "ದೇಶದಲ್ಲಿ ಯಾವುದೇ ಪ್ರತಿಭಟನೆ ನಡೆಯಬಾರದು ಎಂದು ಕೇಂದ್ರ ಸರ್ಕಾರ ಬಯಸುತ್ತದೆ. ಆದರೆ ಎಂಎಸ್ಪಿ ಸೇರಿದಂತೆ ಇತರ ವಿಚಾರಗಳ ಬಗ್ಗೆ ಯಾವುದೇ ಚರ್ಚೆ ನಡೆಸದೇ ಇದ್ದಲ್ಲಿ ನಾವು ಪ್ರತಿಭಟನಾ ಸ್ಥಳದಿಂದ ವಾಪಾಸ್ಸಾಗುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.
"ಪ್ರತಿಭಟನೆಯ ವೇಳೆ ಪ್ರಾಣ ಕಳೆದುಕೊಂಡ ಎಲ್ಲಾ 750 ರೈತರಿಗೆ ಸಿಕ್ಕಿದ ಗೌರವ ಇದಾಗಿದೆ. ಇದರೊಂದಿಗೆ ಎಂಎಸ್ಪಿ ಹಾಗೂ ಇತರೆ ಸಮಸ್ಯೆಗಳು ಸಹ ಬಾಕಿಯಾಗಿವೆ. ಹಾಗಾಗಿ ಸದ್ಯಕ್ಕೆ ಪ್ರತಿಭಟನೆಯನ್ನು ಮುಂದುವರಿಸಲಾಗುವುದು" ಎಂದು ತಿಳಿಸಿದ್ದಾರೆ.
ಸಂಸತ್ನಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೃಷಿ ಕಾಯ್ದೆಗಳ ರದ್ಧತಿ ಮಸೂದೆ 2021ರನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಕೃಷಿ ಕಾಯ್ದೆ ರದ್ಧತಿ 2021ರ ಮೇಲೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಸದನಸ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು. ಈ ಸಂದರ್ಭಪ್ರತಿಪಕ್ಷಗಳು ಶಾಂತಿ ಕಾಪಾಡಿದಲ್ಲಿ ಮಾತ್ರ ಚರ್ಚೆಗೆ ಅವಕಾಶ ನೀಡಬಹುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಿಳಿಸಿದರು.