ಬೆಳಗಾವಿ, ನ.29 (DaijiworldNews/PY): "ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಕೇಳಿರುವುದರಿಂದ ಬಿಜೆಪಿಯ ಶಕ್ತಿ ಕುಂದಿರುವುದು ಸಾಬೀತಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ಧಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ನೊಂದಿಗೆ ಕೈಜೋಡಿಸುವುದಿಲ್ಲ ಎಂದು ಆ ಪಕ್ಷದ ರಾಜ್ಯ ಉಸ್ತುವಾರಿ ಸಚಿವರು ತಿಳಿಸಿದ್ದರು. ಆದರೂ, ಇಲ್ಲಿ ನಾಯಕರು ಬೆಂಬಲ ಕೇಳಿದ್ದಾರೆ. ಅವರು ಬಲಿಷ್ಠರಾಗಿದ್ದರೆ ಅವರ ಬೆಂಬಲ ಕೇಳುವ ಅವಶ್ಯಕತೆ ಇತ್ತೇ?" ಎಂದು ಕೇಳಿದ್ಧಾರೆ.
"ಆ ಪಕ್ಷದ ನಾಯಕ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಜೆಡಿಎಸ್ ಬೆಂಬಲ ಕೇಳಿದ್ದಾರೆ. ಹಾಗಾದರೆ, ಮುಳುಗುತ್ತಿರುವ ಹಡಗು ಯಾವುದು?" ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿ ಈ ಮಟ್ಟಕ್ಕೆ ಬಂದಿದ್ದು, ಬ್ಲ್ಯಾಕ್ಮೇಲರ್ಗಳಿಗೆ ಹೆದರಿ ಸರ್ಕಾರ ನಡೆಸುತ್ತಿದ್ಧಾರಲ್ಲಾ ಎನ್ನುವುದು ನನಗಂತೂ ಬಹಳ ಖುಷಿಯಾಗಿದೆ. ಬಿಜೆಪಿಯವರು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಾರೆ. ಎಲ್ಲವನ್ನೂ ಸಹ ಜನರು ಗಮನಿಸುತ್ತಿದ್ದಾರೆ" ಎಂದಿದ್ದಾರೆ.
"ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಮಾತನಾಡಿರುವುದು ಬಿಜೆಪಿ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ ಅವರು ಕೀಳು ಹೇಳಿಕೆಗಳ ಬಗ್ಗೆ ಉತ್ತರಿಸಲಿ" ಎಂದು ಕಿಡಿಕಾರಿದ್ಧಾರೆ.