ಬೆಂಗಳೂರು, ನ.29 (DaijiworldNews/PY): ಕೊರೊನಾ ರೂಪಾಂತರಿ ಓಮ್ರಿಕಾನ್ ಪತ್ತೆ ಹಿನ್ನೆಲೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಆರೋಗ್ಯ ಇಲಾಖೆ ಹೊರಡಿಸಿದ ಸುತ್ತೋಲೆಯ ಪ್ರಕಾರ, "12 ಅಪಾಯಕಾರಿ ದೇಶಗಳಿಂದ ಪ್ರಯಾಣಿಕರ ಆಗಮನದ ನಂತರ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಿದ್ದು, ವರದಿಯಲ್ಲಿ ನೆಗೆಟಿವ್ ಬಂದರೂ ಏಳು ದಿನ ಹೋಂ ಕ್ವಾರಂಟೈನ್ ಮಾಡಬೇಕು. 8ನೇ ದಿನ ಮತ್ತೆ ಪರೀಕ್ಷೆ ನಡೆಸಿ ಮತ್ತೆ ಏಳು ದಿನ ಸ್ವಯಂ ಕಣ್ಗಾವಲು ಇಡಬೇಕು" ಎಂದು ತಿಳಿಸಿದೆ.
"ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಬೇಕು. ನೆಗೆಟಿವ್ ವರದಿ ಇದ್ದವರಿಗೆ ಮಾತ್ರವೇ ನಗರ ಪ್ರವೇಶಕ್ಕೆ ಅನುಮತಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
"ಹೊಸ ರೂಪಾಂತರಿ ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ಪ್ರಧಾನಮಂತ್ರಿ ಮತ್ತು ಕೇಂದ್ರ ಆರೋಗ್ಯ ಸಚಿವರು ಕೂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಶಿಫಾರಸು ಮಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದಿದ್ದಾರೆ.
ವಿದೇಶದಿಂದ ಬರುವ ಪ್ರಯಾಣಿಕರ ಪರೀಕ್ಷೆ ಹಾಗೂ ಅವರ ಮೇಲೆ ನಿಗಾ ಇರಿಸುವುದಕ್ಕೆ ಇರುವ ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.