ಚಿಕ್ಕಬಳ್ಳಾಪುರ, ನ.29 (DaijiworldNews/PY): ಚಿಕ್ಕಾಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಿವಾಹದ ಫೋಟೋಗಳು ವೈರಲ್ ಆಗುತ್ತಿವೆ.
ಬೆಂಗಳೂರಿನ ಟಿ ದಾಸರಹಳ್ಳಿ ಮೂಲದ ಹಾಗೂ ಎನ್ಜಿಒದಲ್ಲಿ ಕೆಲಸ ಮಾಡುತ್ತಿರುವ 3 ಅಡಿ 8 ಇಂಚು ಎತ್ತರದ 28 ವರ್ಷಕ ಯುವಕ ವಿಷ್ಣುಚಾರಿ ಹಾಗೂ ಕೋಲಾರ ತಾಲೂಕಿನ ಕೋಡಿರಾಮಸಂದ್ರದ ನಿವಾಸಿ ಹಾಗೂ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ 3 ಅಡಿ 5 ಇಂಚು ಎತ್ತರದ ಯುವತಿ ಜ್ಯೋತಿ ವಿವಾಹವಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿರುವ ವಿಷ್ಣುಚಾರಿ ಹಾಗೂ ಜ್ಯೋತಿಗೆ ಖಾಸಗಿ ಸಮಾರಂಭವೊಂದರಲ್ಲಿ ಪರಿಚಯವಾಗಿದೆ. ಪರಿಚಯ ಸ್ನೇಹದಿಂದ ಕೂಡಿರುವಾಗಲೇ ವಿಷ್ಣು ಹಾಗೂ ಜ್ಯೋತಿ ವಿವಾಹ ಮಾಡಿಕೊಳ್ಳುವ ಕುರಿತು ಮನೆಯವರಿಗೆ ತಿಳಿಸಿದ್ದಾರೆ. ಇದರಿಂದ ಎರಡು ಮನೆಯವರು ಕುಳೀತು ಮಾತನಾಡಿ ವಿವಾಹದ ತೀರ್ಮಾನಕ್ಕೆ ಬಂದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದು, ನವ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.