ನವದೆಹಲಿ, ನ 29 (DaijiworldNews/MS): ಅಧಿವೇಶನದಲ್ಲಿ ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಇಂದು ನಡೆಯುವ ಸಂಸತ್ತಿನ ಚಳಿಗಾಲದ ಅಧಿವೇಶನಕ ಲಾಪದಲ್ಲಿ ಭಾಗವಹಿಸುವ ಮುನ್ನ ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಈ ವಿಚಾರ ತಿಳಿಸಿದರು.
" ಇದು ಸಂಸತ್ತಿನ ಅತ್ಯಂತ ಪ್ರಮುಖ ಅಧಿವೇಶನವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ದೇಶದ ನಾಲ್ಕು ಭಾಗಗಳಲ್ಲಿನ ಜನರ, ರಾಷ್ಟ್ರದ ಹಿತಕ್ಕಾಗಿ ರಚನಾತ್ಮಕವಾದ ಮಾತುಕತೆ, ಚರ್ಚೆ ಅಧಿವೇಶನದಲ್ಲಿ ನಡೆಯುವುದು ಮುಖ್ಯವಾಗುತ್ತದೆ. ದೇಶದ ಸಾಮಾನ್ಯ ಜನರಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅವರ ಕನಸನ್ನು ನನಸು ಮಾಡಲು ಸಂಸತ್ತಿನ ಸದಸ್ಯರು ಕೈಜೋಡಿಸಬೇಕು, ಪಕ್ಷಗಳು ಸದನದಲ್ಲಿ ಚರ್ಚೆ ನಡೆಸಬೇಕು ಮತ್ತು ಕಲಾಪಗಳ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು "ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ, ಕೊರೊನಾದ ಹೊಸ ರೂಪಾಂತರ ತಳಿ ಓಮಿಕ್ರಾನ್ ಬಗ್ಗೆ ಜಾಗೃತರಾಗಿರುವಂತೆ ದೇಶದ ಜನರಿಗೆ ಪ್ರಧಾನಿ ಸಲಹೆ ನೀಡಿದ್ದಾರೆ.
ಇದಾದ ಬಳಿಕ ಇಂದು ಸಂಸತ್ ನ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಲೋಕಸಭೆ ಕಲಾಪ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಮುಂದೂಡಲ್ಪಟ್ಟಿದೆ. ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿ ಪಡಿಸಿ ಗದ್ದಲ ಸೃಷ್ಟಿಯಾದ ಕಾರಣ ಸಭಾಧ್ಯಕ್ಷರು ಮಧ್ಯಾಹ್ನ 12: 19 ವರೆಗೆ ಕಲಾಪವನ್ನು ಮುಂದೂಡಿದ್ದಾರೆ.