ಬೆಂಗಳೂರು, ನ 29 (DaijiworldNews/MS): "ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಅಂಬೇಡ್ಕರ್ ಹೆಸರು ನೆನಪಾಗುತ್ತದೆ. ದಲಿತರನ್ನು ಅಧಿಕಾರ ದಾಹದ ಮೆಟ್ಟಿಲಾಗಿಸಿಕೊಂಡ ನಿಮಗೆ ಸಂವಿಧಾನದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ" ಎಂದು ಬಿಜೆಪಿಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಕಿಡಿಕಾರಿದೆ.
ಸಂವಿಧಾನ ಬದಲಾಯಿಸಿದರೆ ರಕ್ತಕ್ರಾಂತಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವೂ, "ಸಂವಿಧಾನ ಬದಲಾಯಿಸಿದರೆ ರಕ್ತಕ್ರಾಂತಿ!!! ಸಿದ್ದರಾಮಯ್ಯನವರೇ, ದಲಿತರನ್ನು ಅಧಿಕಾರ ದಾಹದ ಮೆಟ್ಟಿಲಾಗಿಸಿಕೊಂಡ ನಿಮಗೆ ಸಂವಿಧಾನದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಅಂಬೇಡ್ಕರ್, ಸಂವಿಧಾನ ಹಾಗೂ ದಲಿತರಿಗೆ ಕಾಂಗ್ರೆಸ್ ಮಾಡಿದ ದ್ರೋಹದ ಇತಿಹಾಸ ತಿಳಿದುಕೊಳ್ಳಿ, ಬಳಿಕ ನಿಮ್ಮ ಭಾಷಣವನ್ನು ಮುಂದುವರೆಸಿ" ಎಂದು ಕುಹಕವಾಡಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಅಂಬೇಡ್ಕರ್ ಹೆಸರು ನೆನಪಾಗುತ್ತದೆ. ಸಿದ್ದರಾಮಯ್ಯನವರ ಸಂವಿಧಾನ ಹಾಗೂ ದಲಿತ ಪರ ಕಾಳಜಿಯ ಬಗ್ಗೆ ಪರಮೇಶ್ವರ್ ಹಾಗೂ ಶ್ರೀನಿವಾಸ್ ಪ್ರಸಾದ್ ಅವರ ಬಳಿ ಸ್ವಲ್ಪ ವಿಚಾರಿಸುವುದು ಸೂಕ್ತವಲ್ಲವೇ? ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ಸಿಗರಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಕಿಂಚಿತ್ ಗೌರವವೂ ಇಲ್ಲ.ಅಂಬೇಡ್ಕರ್ ವಿರುದ್ಧ ಅವರ ಸಹಾಯಕನನ್ನೇ ಚುನಾವಣೆಗೆ ನಿಲ್ಲಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾವ ಸೀಮೆಯ ಪ್ರೀತಿ? ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ತಿದ್ದುಪಡಿ ಮಾಡಿದ್ದು ಸಂವಿಧಾನಕ್ಕೆ ನೀಡುವ ಗೌರವವೇ? ಮಾನ್ಯ ಸಿದ್ದರಾಮಯ್ಯನವರೇ, ಸಂವಿಧಾನ ಬದಲಾಯಿಸುವುದು ಎಂದರೆ ಹೇಗೆ? ಕುಟುಂಬ ರಾಜಕಾರಣದ ಪೋಷಣೆಗಾಗಿ ಅಧಿಕಾರವನ್ನು ತಮ್ಮಕಪಿಮುಷ್ಠಿಯಲ್ಲಿರಿಸಿಕೊಳ್ಳಲು ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಹೇರಿದ ರೀತಿಯೇ?ರಕ್ತಕ್ರಾಂತಿ ಎಂದರೆ ಕಾಂಗ್ರೆಸ್ ಕೃಪಾಪೋಷಿತ ಪುಂಡರು ನಡೆಸಿದ ಸಿಖ್ಖ್ ನರಮೇಧದಂತೆಯೇ? ಎಂದು ಪ್ರಶ್ನಿಸಿದೆ.