ಹುಬ್ಬಳ್ಳಿ, ನ.29 (DaijiworldNews/PY): ಕೊರೊನಾ ಲಸಿಕೆಯಿಂದ ಆರೋಗ್ಯಕ್ಕೆ ಸಮಸ್ಯೆಯಾದರೆ ನಾವೇ ಜವಾಬ್ದಾರಿ ಎಂದು ವ್ಯಕ್ತಿಯೋರ್ವರಿಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಮುಚ್ಚಳಿಕೆ ಬರೆದುಕೊಟ್ಟು ಲಸಿಕೆ ನೀಡಿದ ಘಟನೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನೇತೃತ್ವದಲ್ಲಿ ಲಸಿಕೆ ಪಡೆಯುವ ಬಗ್ಗೆ ಧಾರ್ಮಿಕ ಮುಖಂಡರ ಸಭೆ ಕರೆಯಲಾಗಿತ್ತು. ಲಸಿಕೆ ಪಡೆಯುವ ಬಗ್ಗೆ ಭಯವಾಗುತ್ತಿದೆ. ಆರೋಗ್ಯದಲ್ಲಿ ಸಮಸ್ಯೆಯಾದಲ್ಲಿ ಯಾರು ಹೊಣೆ?. ಎಂದು ಯಲ್ಲಾಪುರ ಓಣಿ ನಿವಾಸಿ ಆನಂದ ಕೊನ್ನೂರಕರ ಕಳವಳ ವ್ಯಕ್ತಪಡಿಸಿದ್ದರು.
"ಈಗಾಗಲೇ ಕುಟುಂಬದ ಸದಸ್ಯರು ಲಸಿಕೆ ಪಡೆದುಕೊಂಡಿದ್ಧಾರೆ. ನಾನು ಲಸಿಕೆ ಪಡೆದಾಗ ತೊಂದರೆಯಾದರೆ ನನ್ನ ಕುಟುಂಬದ ಕಥೆಯೇನು? ಇದಕ್ಕೆ ಜಿಲ್ಲಾಡಳಿತವೇ ಮುಚ್ಚಳಿಕೆ ಬರೆದುಕೊಡಬೇಕು" ಎಂದು ಆಗ್ರಹಿಸಿದ್ಧಾರೆ.
"ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಒಂದು ವೇಳೆ ಏನಾದರೂ ದುಷ್ಪರಿಣಾಮ ಉಂಟಾದಲ್ಲಿ ನಾವು ಜವಾಬ್ದಾರಿ ವಹಿಸಿಕೊಳ್ಳುತ್ತೇವೆ" ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಅವರು ಮುಚ್ಚಳಿಕೆ ಬರೆದು, ಜಿಲ್ಲಾ ಪಂಚಾಯತ್ ಸೇರಿದಂತೆ ಕಾರ್ಯನಿರ್ವಹಣಾ ಅಧಿಕಾರಿ, ಉಪ ವಿಭಾಗಾಧಿಕಾರಿ ಸಹಿಯೊಂದಿಗೆ ತಮ್ಮ ಸಹಿ ಹಾಕಿ ನೀಡಿದ್ದಾರೆ.
ಬಳಿಕ ಆನಂದ್ ಅವರಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಯಿತು.