ಮೈಸೂರು, ನ.29 (DaijiworldNews/PY): ಆಸ್ತಿಗೋಸ್ಕರ ಸತ್ತು ಮಲಗಿರುವ ವೃದ್ಧೆಯಿಂದ ಖಾಲಿ ಪತ್ರಕ್ಕ ಹೆಬ್ಬೆಟ್ಟು ಒತ್ತಿಸಿಕೊಳ್ಳಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರಿನ ಶ್ರೀರಾಂಪುರದಲ್ಲಿ ಹನ್ನೊಂದು ದಿನಗಳ ಹಿಂದೆ ಜಯಮ್ಮ (73) ಎಂಬ ವೃದ್ಧೆ ವಯೋಸಹಜ ಕಾರಣಗಳಿಂದ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಪಿತ್ರಾರ್ಜಿತವಾಗಿ 14 ಎಕರೆ ಆಸ್ತಿ ಇತ್ತು. ವಿವಾಹದ ಹೊಸದರಲ್ಲೇ ಪತಿಯಿಂದ ದೂರವಾಗಿದ್ದ ಜಯಮ್ಮ ಆಸ್ತಿಯಲ್ಲಿ ಪಾಲು ಪಡೆಯಲು ಪತಿಯೂ ಇಲ್ಲ ಮಕ್ಕಳೂ ಇಲ್ಲ.
ಜಯಮ್ಮನ ಪಾಲಿನ ಪಿತ್ರಾರ್ಜಿತ ಆಸ್ತಿಗಾಗಿ ತವರು ಮನೆಯಲ್ಲಿ ಗೊಂದಲ ಉಂಟಾಗಿದೆ. ಜಯಮ್ಮನಿಗೆ ಇಬ್ಬರು ಅಕ್ಕಂದಿರು ಹಾಗೂ ಒಬ್ಬ ತಮ್ಮ ಇದ್ದಾರೆ.
ಜಯಮ್ಮ ಸತ್ತು ಮಲಗಿದಾಗ ಅವರ ಅಕ್ಕನ ಮಗ ಆಸ್ತಿಗೋಸ್ಕರ ಬಾಂಡ್ ಪೇಪರ್ ಮೇಲೆ ಶವದ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾರೆ.
ಖಾಲಿ ಪೇಪರ್ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.