ಬೆಂಗಳೂರು, ನ.29 (DaijiworldNews/PY): ನಟ ಪುನೀತ್ ರಾಜ್ಕುಮಾರ್ ಅವರ ಸಂಸ್ಥೆಯ ಸಹಾಯಾರ್ಥ ನಡೆಯಬೇಕಿದ್ದ ಶೋವೊಂದನ್ನು ಬೆಂಗಳೂರು ಪೊಲೀಸರು ತಡೆದಿದ್ದು, ಕಾರ್ಯಕ್ರಮ ರದ್ದಾಗಿದೆ.
ಕಾಮಿಡಿಯನ್ ಮುನಾವರ್ ಫಾರೂಕಿ ಅವರು ನಡೆಸಬೇಕಿದ್ದ ಹಾಸ್ಯಭರಿತ ಮನರಂಜನಾ ಕಾರ್ಯಕ್ರಮ ಭಾನುವಾರ ಬೆಂಗಳೂರಿನ ಗುಡ್ ಷೆಫರ್ಡ್ ಆಡಿಟೋರಿಯಂನಲ್ಲಿ ನಡೆಯಬೇಕಿತ್ತು. ಆದರೆ, ಮುನಾವರ್ ಫಾರೂಕಿ ಅವರ ಈ ಕಾರ್ಯಕ್ರಮ ನಡೆದಲ್ಲಿ ವಿಧ್ವಂಸಕ ಕೃತ್ಯ ನಡೆಯವ ಸಾಧ್ಯತೆ ಇದೆ ಎನ್ನುವ ಹಿನ್ನೆಲೆಯಲ್ಲಿ ಇದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಪೊಲೀಸರು, "ಫಾರೂಕಿ ಅವರ ಈ ಕಾರ್ಯಕ್ರಮ ನಡೆದರೆ ಸಾರ್ವಜನಿಕ ಸೌಹಾರ್ದತೆಗೆ ತೊಂದರೆಯಾಗುವ ಸಾಧ್ಯತೆ ಇರುವುದು ಮೂಲಗಳಿಂದ ತಿಳಿದುಬಂದಿರುವ ಕಾರಣ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ತಡೆ ಹಾಕಲಾಗಿದೆ" ಎಂದು ಹೇಳಿದ್ದಾರೆ.
ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಟ್ವೀಟ್ಟರ್ನಲ್ಲಿ ಬರೆದುಕೊಂಡಿರುವ ಅವರು, "ಈ ಕಾರ್ಯಕ್ರಮವನ್ನು ನಾವು ಪುನೀತ್ ರಾಜ್ಕುಮಾರ್ ಅವರ ಫೌಂಡೇಶನ್ ಸಹಾಯಾರ್ಥವಾಗಿ ಹಮ್ಮಿಕೊಂಡಿದ್ದೆವು. ಪುನೀತ್ ಅವರ ಫೌಂಡೇಶನ್ ಅನುಮತಿ ಪಡೆದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಪುನೀತ್ ಅವರ ಹೆಸರು ಬಳಸಿ ಶೋ ಟಿಕೆಟ್ ಮಾರಾಟ ಮಾಡಬಾರದು ಎಂದು ಪುನೀತ್ ಅವರ ಫೌಂಡೇಶನ್ ಸೂಚಿಸಿದ್ದ ಕಾರಣ ಆ ವಿಚಾರವನ್ನು ಹಂಚಿಕೊಂಡಿರಲಿಲ್ಲ" ಎಂದು ತಿಳಿಸಿದ್ದಾರೆ.