ಬೆಂಗಳೂರು, ನ. 28 (DaijiworldNews/HR): ಬಿಟ್ ಕಾಯಿನ್ ಪ್ರಕರಣದ ಆರೋಪಿ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿ ಹೋಟೆಲ್ ಗಲಾಟೆ ಸಂಬಂಧ ನಿರೀಕ್ಷಣಾ ಜಾಮೀನು ಪಡೆದು ಹೊರಬಂದಿದ್ದು, ಈಗ ತನಿಖಾಧಿಕಾರಿ ಮುಂದೆಯೂ ಹಾಜರಾಗದೇ, ಪೊಲೀಸರ ಕಣ್ಣಿಗೂ ಕಾಣಿಸದೇ ತಲೆ ಮರೆಸಿಕೊಂಡಿದ್ದಾನೆ.
ಹೋಟೆಲ್ ಗಲಾಟೆ ಸಂಬಂಧ ಜೆಪಿ ನಗರ ಪೊಲೀಸರು ಶ್ರೀಕಿಯನ್ನು ಬಂಧಿಸಿದ್ದು, ಬಳಿಕ ಷರತ್ತುಬದ್ಧ ಜಾಮೀನಿನ ಮೂಲಕ ಪರಪ್ಪನ ಅಗ್ರಹಾರ ಜೈಲಿನಿಂದ ಶ್ರೀಕಿ ಹೊರ ಬಂದಿದ್ದ. ಷರತ್ತು ಬದ್ಧ ಜಾಮೀನಿನಲ್ಲಿ ಪ್ರತಿ ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಆದ್ರೆ ನಿನ್ನೆ ಶ್ರೀಕಿ ತನಿಖಾಧಿಕಾರಿ ಮುಂದೆ ಹಾಜರಾಗಲಿಲ್ಲ.
ಇನ್ನು ಶ್ರೀಕಿ ಮೊಬೈಲ್ ಪೋನ್ ಕೂಡ ಬಳಸುತ್ತಿಲ್ಲ ಎನ್ನಲಾಗಿದ್ದು, ಠಾಣೆಗೆ ಹಾಜರಾಗದೆ ಇರೋದಕ್ಕೆ ಶ್ರೀಕೃಷ್ಣ ಕಾರಣವನ್ನೂ ನೀಡಿಲ್ಲ. ಹೀಗಾಗಿ ಆತನ ನಡೆ ನಿಗೂಢವಾಗಿದೆ.
ಬಿಟ್ ಕಾಯಿನ್ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಜಾಮೀನು ಕೊಡಿಸಿದವರು ಯಾರು ಎಂಬುದೂ ತಿಳಿದಿಲ್ಲ. ದೊಡ್ಡವರು ದೊಡ್ಡ ದೊಡ್ಡವರ ಹೆಸರು ಹೇಳುತ್ತಾರೆ ಎಂದು ಜೈಲಿನಿಂದ ಬಿಡುಗಡೆಯಾದ ಬಳಿಕ ಶ್ರೀಕಿ ಮಾಧ್ಯಮಗಳೆದುರು ಹೇಳಿದ್ದ.